ಪ್ರಜ್ವಲ್ ಬಳಿಕ ರೇವಣ್ಣ ಮತ್ತೊಬ್ಬ ಪುತ್ರನ ಮೇಲೆ ಸಲಿಂಗ ಕಾಮ ಕೇಸ್!?


ಹಾಸನ/ಬೆಂಗಳೂರು
: ಅಶ್ಲೀಲ ವಿಡಿಯೋಗಳನ್ನು ಹೊಂದಿದ ಪೆನ್‌ಡ್ರೈವ್‌ ವಿವಾದದಿಂದಾಗಿ ದೇಶಾದ್ಯಂತ ಚರ್ಚೆಯಾಗಿದ್ದ ಹಾಸನದಲ್ಲಿ ಇದೀಗ ಮತ್ತೊಂದು ಕಾಮಕಾಂಡದ ಆರೋಪ ಕೇಳಿ ಬಂದಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮೊಮ್ಮಗ, ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸಂಚಲನ ಮೂಡಿಸಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ- ಭವಾನಿ ದಂಪತಿಯ ಕಿರಿಯ ಪುತ್ರ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಇದರ ಸಂದರ್ಭದಲ್ಲೇ ರೇವಣ್ಣ ದಂಪತಿಯ ಹಿರಿಯ ಪುತ್ರ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡಿನ ಯುವಕನೊಬ್ಬ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿ ಮತ್ತು ಐಜಿಪಿ) ಅವರಿಗೆ ಪತ್ರದ ಮೂಲಕ ದೂರು ನೀಡಿದ್ದಾನೆ. ಬಹಿರಂಗವಾಗಿಯೂ ಆರೋಪ ಮಾಡಿದ್ದಾನೆ. ಅಲ್ಲದೆ ಸೂರಜ್‌ ಅವರ ಜತೆ ನಡೆಸಿದ್ದು ಎನ್ನಲಾದ ಸಂಭಾಷಣೆಯ ಆಡಿಯೋ, ವಾಟ್ಸಾಪ್‌ ಚಾಟ್‌ಗಳು ಕೂಡ ಹರಿದಾಡಿವೆ. ಈ ಮಧ್ಯೆ, ಸಂತ್ರಸ್ತ ಯುವಕನ ವಿರುದ್ಧ ಸೂರಜ್ ಆಪ್ತ ಶಿವಕುಮಾರ್‌ ಎಂಬುವರು ಹೊಳೆನರಸೀಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸಂತ್ರಸ್ತ 5 ಕೋಟಿ ರು.ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದರೆ ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಪೋಲಿಸ್‌ ಠಾಣೆಯಲ್ಲಿ ಸಂತ್ರಸ್ತನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಿಂದಾಗಿ ಈಗಾಗಲೇ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದ ರೇವಣ್ಣ ಕುಟುಂಬ ಮತ್ತಷ್ಟು ಮುಜುಗರಕ್ಕೆ ಒಳಗಾಗುವಂತಾಗಿದೆ. 

  ಸೂರಜ್‌ ದೂರಿನಲ್ಲೇನಿದೆ?:

‘ಅರಕಲಗೂಡು ತಾಲೂಕಿನ ಈ ಯುವಕ ಕೆಲಸ ಕೇಳಿಕೊಂಡು ಬಂದಿದ್ದ. ನಾನು ನಮ್ಮ ಬಾಸ್‌ (ಸೂರಜ್ ರೇವಣ್ಣ) ನಂಬರ್‌ ಕೊಟ್ಟಿದ್ದೆ. ಜೂ.16 ರಂದು ಗನ್ನಿಕಡದ ತೋಟದ ಮನೆಗೆ ಸೂರಜ್‌ ಬಳಿ ಕೆಲಸ ಕೇಳಲು ಹೋಗಿದ್ದ ಈ ಯುವಕ, ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ನೀವ್ಯಾರು ನನಗೆ ಕೆಲಸ ಕೊಡಿಸಲ್ಲ. ನನಗೆ ತುಂಬಾ ಕಷ್ಟ ಇದೆ. ನಿಮ್ಮ ಬಾಸ್‌ನಿಂದ 5 ಕೋಟಿ ರು. ಕೊಡಿಸದಿದ್ದರೆ ಅವರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್ ಹಾಕುತ್ತೇನೆ. ಮಾಧ್ಯಮದ ಮುಂದೆ ಹೋಗಿ, ಸೂರಜ್ ರೇವಣ್ಣ ಅವರ ಗೌರವ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಜೂ.18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್‌ಸಿ ಸೀಲ್ ಹಾಕಿಸಿ, ಫೋಟೋ ಹಾಕಿ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ಸೂರಜ್‌ ಆಪ್ತ ಶಿವಕುಮಾರ್‌ ಆರೋಪಿಸಿದ್ದಾರೆ. ಈ ಸಂಬಂಧ ಜೂ.18ರಂದು ದೂರು ದಾಖಲಾಗಿದೆ. ಇದರ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ. 

  ಯುವಕನ ದೂರಲ್ಲೇನಿದೆ?: 

 ತನ್ನ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಈಗ ತನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾನೆ ಎನ್ನಲಾಗಿದೆ.ತಾನು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳ್ಳಿಯೊಂದರ ನಿವಾಸಿಯಾಗಿದ್ದು, ಬಿಕಾಂ ಪದವೀಧರ. ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್‌ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೆ. ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಕೆಲಸ ಮಾಡಿದ್ದೆ. ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಪಜ್ವಲ್‌ ಪರ ಪ್ರಚಾರಕ್ಕೆ ನಮ್ಮ ಊರಿಗೆ ಬಂದಿದ್ದಾಗ ಪರಿಚಯವಾಗಿದ್ದರು. ಆಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. 

  ತೋಟದ ಮನೆಯಲ್ಲಿ ಲೈಂಗಿಕ ದೌರ್ಜನ್ಯ:

ಸೂರಜ್‌ ರೇವಣ್ಣ ಜೂ.14ರಂದು ಸಂಜೆ ನನಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ಅವರ ಆಹ್ವಾನದ ಮೇರೆಗೆ ಜೂ.16ರಂದು ಅವರನ್ನು ಭೇಟಿ ಮಾಡಲು ತೋಟದ ಮನೆಗೆ ತೆರಳಿದ್ದೆ. ಈ ವೇಳೆ ಮನೆಯಲ್ಲಿ ಸೂರಜ್‌ ರೇವಣ್ಣ ಒಬ್ಬರೇ ಇದ್ದರು. ಬಾಗಿಲು ಹಾಕು ಎಂದರು. ಅದರಂತೆ ಬಾಗಿಲು ಹಾಕಿದೆ. ಮೊಬೈಲ್‌ ಸ್ವಿಚ್ ಆಫ್‌ ಮಾಡುವಂತೆ ಸೂಚಿಸಿದರು. ನಾನು ಸ್ವಿಚ್ ಆಫ್‌ ಮಾಡಿದೆ. ಬಳಿಕ ಅವರು ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌಜನ್ಯ ಎಸಗಿದರು. ನಾನು ಪ್ರತಿರೋಧವೊಡ್ಡಿದಾಗ ನಿನ್ನನ್ನು ಇಲ್ಲೇ ಸಾಯಿಸಿ, ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು. ಬಳಿಕ ಅವರು ಒತ್ತಾಯ ಪೂರ್ವಕವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಧಮಕಿ ಹಾಕಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

  ಸೂರಜ್‌ ವಿರುದ್ಧ ಜೀವ ಬೆದರಿಕೆ ಆರೋಪ: 

 ನನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರವನ್ನು ಸೂರಜ್‌ ರೇವಣ್ಣ ಅವರ ಆಪ್ತ ಹಾಗೂ ನನಗೂ ಸ್ನೇಹಿತನಾಗಿದ್ದ ಶಿವಕುಮಾರ್‌ಗೆ ತಿಳಿಸಿದೆ. ಬಳಿಕ ಶಿವಕುಮಾರ್‌ ಹಣಕ್ಕೆ ಡಿಮ್ಯಾಂಡ್ ಮಾಡುವಂತೆ ಅವರೇ ಮೊಬೈಲ್‌ನಲ್ಲಿ ಕರೆ ಮಾಡಿಕೊಟ್ಟರು. ಈ ವೇಳೆ ಸೂರಜ್‌ 2 ಕೋಟಿ ರು. ಹಣ ಹಾಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದರು. ಬಳಿಕ ನಾನು ಯಾವುದಕ್ಕೂ ಒಪ್ಪದೆ ತಪ್ಪಿಸಿಕೊಂಡು ಬಂದೆ. ಸೂರಜ್‌ ರೇವಣ್ಣ ಮತ್ತು ಅವರ ಮನೆಯವರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹೀಗಾಗಿ ನಾನು ಊರಿಗೆ ಹೋಗಲು ಸಾಧ್ಯವಾಗದೆ ಅತಂತ್ರವಾಗಿದ್ದೇನೆ. ನನಗೆ ಕಾನೂನು ಪ್ರಕಾರ ನ್ಯಾಯ ಬೇಕು. ಸೂರಜ್‌ ರೇವಣ್ಣಗೆ ತಕ್ಕ ಶಿಕ್ಷೆಯಾಗಬೇಕು. ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಯುವಕ ದೂರಿನಲ್ಲಿ ಮನವಿ ಮಾಡಿದ್ದಾನೆ.