ಮೆದುಳಿನ ಚಿಪ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂರಾಲಿಂಕ್ ಈಗಾಗಲೇ ಮೊದಲ ಮಾನವ ಪ್ರಯೋಗ ನಡೆಸುತ್ತಿದೆ. 29 ವರ್ಷದ ನೋಲ್ಯಾಂಡ್ ಅರ್ಬಾಗ್ ಎಂಬವರ ಮೇಲೆ ಈ ಪ್ರಯೋಗ ಮಾಡಲಾಗಿದೆ.
ತಮ್ಮ ಹಣೆಯ ಮೇಲೆ ನ್ಯೂರಲ್ ನೆಟ್‌ವರ್ಕ್ ವಿನ್ಯಾಸದೊಂದಿಗೆ ಫೋನ್ ಅನ್ನು ಹಿಡಿದಿರುವ ಮಸ್ಕ್‌ನ ಎಐ ರಚಿತ ಚಿತ್ರವನ್ನು ಇದರೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇದನ್ನು ನೋಡಿರುವ ಕೆಲವರು ತಮ್ಮ ಸಾಧನಗಳನ್ನು ಆಲೋಚನೆಯಿಂದ ನಿಯಂತ್ರಿಸಲು ನ್ಯೂರಾಲಿಂಕ್ ಇಂಟರ್‌ಫೇಸ್ ಅನ್ನು ಸ್ಥಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಸ ಎಕ್ಸ್ ಫೋನ್ ನಲ್ಲಿ ನಿಯಂತ್ರಿಸಲು ನಿಮ್ಮ ಮೆದುಳಿನಲ್ಲಿ ನ್ಯೂರಾಲಿಂಕ್ ಇಂಟರ್ ಫೇಸ್ ಅನ್ನು ಸ್ಥಾಪಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನ್ಯೂರಾಲಿಂಕ್‌ನ ಮೊದಲ ಬಾರಿಗೆ ಪ್ರಯೋಗಿಸಿರುವ ಮಾನವ ಅರ್ಬಾಗ್ ಎಂಟು ವರ್ಷಗಳ ಹಿಂದೆ ಅಪಘಾತದ ಅನಂತರ ಭುಜದಿಂದ ಕೆಳಕ್ಕೆ ಪಾರ್ಶ್ವವಾಯುವಿಗೆ ಒಳಗಾದರು. ಅವರು ಜನವರಿ 28ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ಬಳಿಕ ನ್ಯೂರಾಲಿಂಕ್ ಬ್ಲಾಗ್‌ಪೋಸ್ಟ್‌ನಲ್ಲಿ ಈ ಕುರಿತು ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಿತು.
ಮಾರ್ಚ್‌ನಲ್ಲಿ ನ್ಯೂರಾಲಿಂಕ್ ಅರ್ಬಾಗ್‌ನ ಪ್ರಗತಿಯನ್ನು ಪ್ರದರ್ಶಿಸುವ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ನ್ಯೂರಾಲಿಂಕ್‌ನ ಬಿಸಿಐ ಚಿಪ್ ತನ್ನ ಅಂಗವೈಕಲ್ಯವನ್ನು ತಾನು ಇಷ್ಟಪಡುವ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎಂದು ಹೇಳಿದ್ದು, ಈಗ ತಾವು ಚೆಸ್ ಆಡುವುದರ ಬಗ್ಗೆ ಅವರು ತಮ್ಮ ಸಂತೋಷ ಹೊರಹಾಕಿದ್ದರು.
ಪ್ರತಿದಿನ ನಾನು ಹೊಸದನ್ನು ಕಲಿಯುತ್ತಿದ್ದೇನೆ ಎಂಬಂತೆ ತೋರುತ್ತದೆ. ಇದನ್ನು ನನಗೆ ಮಾಡಲು ಸಾಧ್ಯವಾಗಿರುವುದು ಅದೃಷ್ಟ ಎಂದು ಅರ್ಬಾಗ್ ಹೇಳಿದ್ದಾರೆ. ಎರಡನೇ ಪ್ರಯೋಗದಲ್ಲಿ ಪಾಲ್ಗೊಳ್ಳುವವರಿಗೆ ಅರ್ಜಿಗಳನ್ನು ಸ್ವೀಕರಿಸಲು ನ್ಯೂರಾಲಿಂಕ್ ಈಗ ಮುಕ್ತವಾಗಿದೆ ಎಂದು ಮಸ್ಕ್ ಇತ್ತೀಚೆಗೆ ಘೋಷಿಸಿದರು.
ನ್ಯೂರಾಲಿಂಕ್ ಪ್ರಯೋಗದಲ್ಲಿ ಎರಡನೇ ವ್ಯಕ್ತಿಯಾಗಿ ಪಾಲ್ಗೊಳ್ಳುವವರಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಇದು ನಮ್ಮ ಟೆಲಿಪತಿ ಸೈಬರ್ನೆಟಿಕ್ ಬ್ರೈನ್ ಇಂಪ್ಲಾಂಟ್ ಆಗಿದ್ದು ಅದು ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಅನ್ನು ಯೋಚಿಸುವ ಮೂಲಕ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.
ಅಪಾಯಕಾರಿ ಎಂದಿರುವ ಪ್ರಾಣಿ ಅರೈಕೆ ತಜ್ಞ
ಈ ಬೆಳವಣಿಗೆಯ ನಡುವೆಯೇ ನ್ಯೂರಾಲಿಂಕ್‌ಗೆ ಹಲವು ಸವಾಲುಗಳು ಎದುರಾಗಿದೆ. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಪ್ರಾಣಿಗಳ ಆರೈಕೆ ತಜ್ಞ ಲಿಂಡ್ಸೆ ಶಾರ್ಟ್ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಪ್ರಾಣಿಗಳಲ್ಲಿ ನ್ಯೂರಾಲಿಂಕ್‌ಗಳನ್ನು ಹಾಕಿ ನೋಡಿಕೊಳ್ಳುವಾಗ ಸರಿಯಾದ ರಕ್ಷಣಾ ಸಾಧನಗಳನ್ನು ಒದಗಿಸಲು ಕಂಪನಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಾಣಿಗಳಲ್ಲಿ ಕೆಲವು ಅಪಾಯಕಾರಿ ವೈರಸ್ ಅನ್ನು ಹೊತ್ತಿದ್ದು, ಅದು ಗಂಭೀರವಾದ ಮೆದುಳಿನ ಹಾನಿ ಅಥವಾ ಮಾನವರಲ್ಲಿ ಸಾವಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.