ಭಾರತ ನೀಡಿದ 172ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 16.4 ಓವರ್ ನಲ್ಲಿ 103 ರನ್ ಗೆ ಆಲೌಟ್ ಆಯಿತು. ಆ ಮೂಲಕ ಭಾರತದ ಎದುರು 68ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಬ್ಯಾಟಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡ ಬೌಲಿಂಗ್ ನಲ್ಲೂ ಕರಾರುವಕ್ಕಾದ ದಾಳಿ ನಡೆಸಿ ಇಂಗ್ಲೆಂಡ್ ದಾಂಡಿಗರನ್ನು ಕಾಡಿತು. ಆರಂಭದಿಂದಲೂ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ 26ರನ್ ಗೆ ಇಂಗ್ಲೆಂಡ್ ನ ಮೊದಲ ವಿಕೆಟ್ ಪಡೆಯಿತು.
23 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ್ದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ರನ್ನು ಅಕ್ಸರ್ ಪಟೇಲ್ ಔಟ್ ಮಾಡಿದರು. ಅಲ್ಲಿಂದ ಇಂಗ್ಲೆಂಡ್ ಪತನ ಆರಂಭವಾಯಿತು. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊಯಿನ್ ಅಲಿ 8 ರನ್ ಗಳಿಸಿದರೆ, ಜಾನಿ ಬೇರ್ ಸ್ಟೋ ಶೂನ್ಯ ಸುತ್ತಿದರು.
ಈ ಹಂತದಲ್ಲಿ ಕ್ರೀಸ್ ಗೆ ಬಂದ ಹ್ಯಾರಿ ಬ್ರೂಕ್ 25ರನ್ ಗಳಿಸಿ ಅಪಾಯಕಾರಿಯಾದರೂ ಅವರನ್ನು ಕುಲದೀಪ್ ಯಾದವ್ ಕ್ಲೀನ್ ಬೋಲ್ಡ್ ಮಾಡಿದರು. ಲಿವಿಂಗ್ ಸ್ಟೋನ್ 11 ರನ್ ಗಳಿಸಿದರೆ, ಸ್ಯಾಮ್ ಕರನ್ 2, ಜೋರ್ಡನ್ 1 ರನ್ ಔಟ್ ಆದರು. ಅದಿಲ್ ರಷೀದ್ ಸೂರ್ಯ ಕುಮಾರ್ ಯಾದವ್ ರ ಅಮೋಘ ರನೌಟ್ ಗೆ ಬಲಿಯಾದರು.
ಅಂತಿಮವಾಗಿ ಇಂಗ್ಲೆಂಡ್ ತಂಡ 17.1 ಓವರ್ ಗೆ 103ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 68ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಕುಲದೀಪ್, ಅಕ್ಸರ್ ಪಟೇಲ್ ಮ್ಯಾಜಿಕ್
ಇನ್ನು ಈ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ಜೋಡಿ ಇಂಗ್ಲೆಂಡ್ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿತು. ಈ ಜೋಡಿ ತಲಾ 3 ವಿಕೆಟ್ ಪಡೆದು ಭಾರತ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಅಕ್ಸರ್ 4 ಓವರ್ ಎಸೆದು 23 ರನ್ ನೀಡಿ ಮೂರು ವಿಕೆಟ್ ಪಡೆದರೆ, ಕುಲದೀಪ್ 4 ಓವರ್ ಎಸೆದು ಕೇವಲ 19ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸು
ಇನ್ನು ಇಂದಿನ ಗೆಲುವಿನೊಂದಿಗೆ ಭಾರತ ತಂಡ ಫೈನಲ್ ಗೇರಿದ್ದು, ಬಾರ್ಬೋಡಾಸ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.