ಬೆಂಗಳೂರು, ಜುಲೈ 4: ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ಗಳನ್ನು ಅಳವಡಿಸಿ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಜುಲೈನಿಂದ ಕಾರ್ಯಾಚರಣೆ ರಂಭಿಸುವುದಾಗಿ ತಿಳಿಸಿದ್ದ ಕರ್ನಾಟಕ ಸಂಚಾರ ಪೊಲೀಸರು ಇದೀಗ ಬಿಸಿಮುಟ್ಟಿಸಲು ಆರಂಭಿಸಿದ್ದಾರೆ. ಈವರೆಗೆ ರಾಜ್ಯದಲ್ಲಿ 1518 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಕೇಸ್ಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲೇ ಅತಿಹೆಚ್ಚು
ತೀಕ್ಷ್ಣ ಬೆಳಕು ಸೂಸುವಂಥ ಎಲ್ಇಡಿ ಲೈಟ್ಗಳನ್ನು ಅಳವಡಿಸಿದ ಅತಿಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ನಗರದಲ್ಲಿ 686 ಕೇಸ್ ದಾಖಲಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಮಂಗಳೂರು ನಗರ (96) ಹಾಗೂ ರಾಯಚೂರು (93) ಇವೆ. ಕೊಪ್ಪಳ, ಕೆಜಿಎಫ್, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ.
ಬಿಸಿ ಮುಸ್ಟಿಸಲು ಶುರುಮಾಡಿದ್ದೇವೆ: ಅಲೋಕ್ ಕುಮಾರ್
ಬಿಸಿ ಮುಸ್ಟಿಸಲು ಶುರುಮಾಡಿದ್ದೇವೆ. ಕೇಂದ್ರ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ತೀಕ್ಷ್ಣ ಬೆಳಕು ಸೂಸುವ ಎಲ್ಇಡಿ ಲೈಟ್ ಅಳವಡಿಸಿದ ಸಂಬಂಧ 1518 ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ರಮ ಕೈಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ವಂದನೆಗಳು ಎಂದು ಅಲೋಕ್ ಕುಮಾರ್ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಜೂನ್ ಮಧ್ಯಭಾಗದಲ್ಲೇ ಎಚ್ಚರಿಕೆ ನೀಡಿದ್ದ ಅಲೋಕ್ ಕುಮಾರ್
ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್ಗಳನ್ನು ಮಾತ್ರವೇ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವುದಾಗಿ ಅಲೋಕ್ ಕುಮಾರ್ ಜೂನ್ ಮಧ್ಯಭಾಗದಲ್ಲಿ ತಿಳಿಸಿದ್ದರು.
ವಾಹನಗಳಲ್ಲಿ ಕಣ್ಣುಕುಕ್ಕುವಂಥ ಲೈಟ್ಗಳನ್ನು ಬಳಸುತ್ತಿದ್ದರೆ ಮತ್ತು ವಾಹನಗಳಲ್ಲಿ ಅಳವಡಿಸಿರುವ ಲೈಟ್ಗಳು ಇತರ ಚಾಲಕರಿಗೆ ತೊಂದರೆಯನ್ನು ಉಂಟು ಮಾಡುವಂತೆ ಇದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ನಾವು ಸೂಚಿಸುತ್ತೇವೆ. ಎಲ್ಇಡಿ ಲೈಟ್ಗಳು ಇತರ ಚಾಲಕರಿಗೆ ಸಮಸ್ಯೆ ಉಂಟುಮಾಡುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದರು. ಅಲ್ಲದೆ, ಜುಲೈನಿಂದ ವಿಶೇಷ ಕಾರ್ಯಾಚರಣೆ ನಡೆಸುವುದಾಗಿಯೂ ತಿಳಿಸಿದ್ದರು.