ಜುಲೈ 4 ರಂದು ದೇಶಾದ್ಯಂತ ಶಾಲಾ-ಕಾಲೇಜು ಬಂದ್‌..!


ಬೆಂಗಳೂರು: ಕಳೆದ ತಿಂಗಳು ಶಾಲಾ-ಕಾಲೇಜುಗಳು ಬೇಸಿಗೆ ರಜೆ ನಂತರ ಮತ್ತೆ ತರಗತಿಯನ್ನು ಆರಂಭಿಸಿವೆ. ಪ್ರಸ್ತುತ ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಈ ಸಮಯದಲ್ಲಿ ಜುಲೈ 4 ರಂದು ದೇಶಾದ್ಯಂತ ಶಾಲಾ-ಕಾಲೇಜು ಎಂಟು ಬೇಡಿಕೆಗಳ ಈಡೇರಿಕೆ ಸಲುವಾಗಿ ಬಂದ್‌ಗೆ ಕರೆ ನೀಡಿವೆ.ಹೌದು, ನೀಟ್ ಮತ್ತು ನೆಟ್ ಪರೀಕ್ಷೆಗಳ ಪತ್ರಿಕೆ ಸೋರಿಕೆ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಜುಲೈ 4 ರಂದು ದೇಶಾದ್ಯಂತ ಶಾಲಾ-ಕಾಲೇಜು ಬಂದ್‌ಗೆ ಕರೆ ನೀಡಿವೆ. 

ಎನ್ ಟಿಎ ರದ್ದು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಎಸ್ ಐಎಫ್, ಎಐಎಸ್ ಎಫ್, ಪಿಡಿಎಸ್ ಯು, ಪಿಡಿಎಸ್ ಒ, ಎನ್ ಎಸ್ ಯುಐ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ. ಕಳೆದ ಐದು ವರ್ಷಗಳಲ್ಲಿ 65 ಪೇಪರ್ ಸೋರಿಕೆ ಘಟನೆಗಳು ನಡೆದಿದ್ದು, ಪೇಪರ್ ಸೋರಿಕೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿ ನ್ಯಾಯ ಕೊಡಿಸುವಂತೆ ಮೋದಿ ಅವರನ್ನು ಕೋರಿದ್ದಾರೆ.

ಇನ್ನು ಒನ್ ನೇಷನ್-ಒನ್ ಎಕ್ಸಾಮ್ ನೆಪದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ ತಂದೊಡ್ಡಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆರೋಪಿಸಿದ್ದು, ಇಡೀ ಪರೀಕ್ಷಾ ವ್ಯವಸ್ಥೆಯೇ ಕುಸಿದಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸಲು ಎನ್‌ಟಿಎ ವಿಫಲವಾಗಿದೆ ಎಂದು ಹೇಳಿದ್ದು, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿಯನ್ನು ವಿರೋಧಿಸಿ ಎಸ್‌ಎಫ್‌ಐ ಕೇಂದ್ರ ಕಾರ್ಯಕಾರಿ ಸಮಿತಿಯು ಜುಲೈ 4 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ. 

ಎಂಟು ಬೇಡಿಕೆಗಳ ಮೇಲೆ ಈ ಬಂದ್ ನಡೆಯಲಿದ್ದು, ಎನ್‌ಟಿಎ ಪದ್ಧತಿಯನ್ನು ರದ್ದುಪಡಿಸಬೇಕು ಮತ್ತು ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ. ಇದಲ್ಲದೆ, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಇತ್ತೀಚೆಗೆ ಅನುಮೋದಿಸಲಾದ ಕಡ್ಡಾಯ ನೆಟ್ ಸ್ಕೋರ್ ವ್ಯವಸ್ಥೆಯನ್ನು ಹಿಂಪಡೆಯಲು ವಿದ್ಯಾರ್ಥಿ ಸಂಘಗಳು ಒತ್ತಾಯಿಸಿವೆ.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿದ್ಯಾರ್ಥಿ ಲೋಕಂ ಬಂದ್‌ನಲ್ಲಿ ಭಾಗವಹಿಸಿ, ತರಗತಿ ಬಹಿಷ್ಕರಿಸಿ, ರ್ಯಾಲಿ ಮತ್ತು ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ.