Crime: ಶಾಲಾ ಮಕ್ಕಳಿಂದ ಇದೆಂಥಾ ಹೀನ ಕೃತ್ಯ; 03ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪ್ರಾಪ್ತ ವಯಸ್ಕರು

ಅಮರಾವತಿ: ಹೃದಯವಿದ್ರಾವಕ ಘಟನೆ ಒಂದರಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ವಯಸ್ಸಿನ ಮೂವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿ ಕಾಲುವೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. 
ಘಟನೆ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತರು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.ಇದಲ್ಲದೆ ಆರೋಪಿಗಳು ಸಾಕ್ಷ್ಯ ನಾಶ ಮಾಡಲು ಬಾಲಕಿಯ ಮೃತದೇಹವನ್ನು ಕಾಲುವೆಗೆ ಎಸೆದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಚ್ಚುಮರ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುಣಶೇಖರ್, ಸಂತ್ರಸ್ತೆ ಹಾಗೂ ಆರೋಪಿಗಳು ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದ ದಿನ ಆರೋಪಿಗಳು ಬಾಲಕಿ ಪಾರ್ಕಿನಲ್ಲಿ ಒಬ್ಬಳೇ ಆಟವಾಡುತ್ತಿರುವುದನ್ನು ಗಮನಿಸಿ ಆಕೆಯನ್ನು ಮಾತನಾಡಿಸಿ ಆಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಹೇಳಿದ್ದಾರೆ. ಆರೋಪಿಗಳ ಮನವಿಯನ್ನು ಒಪ್ಪಿದ ಬಾಲಕಿ ಮೂವರನ್ನು ಆಟಕ್ಕೆ ಸೇರಿಸಿಕೊಂಡಿದ್ದಾಳೆ. 

ಮಕ್ಕಳನ್ನು ಉಲ್ಟಾ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ; ಕಾರಣ ಹೀಗಿದೆ

ಇದಾದ ಸ್ವಲ್ಪ ಸಮಯದ ಬಳಿಕ ಆರೋಪಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಈ ವಿಚಾರ ಬಾಲಕಿ ಪೋಷಕರಿಗೆ ತಿಳಿಸಿದರೆ ಪರಿಣಾಮ ಬೀರಬಹುದೆಂದು ಭಯಪಟ್ಟ ಆರೋಪಿಗಳು ಆಕೆಯನ್ನು ಕೊಲೆ ಮಾಡಿ ಬಳಿಕ ಶವವನ್ನು ಮುಚ್ಚುಮರ್ರಿ ಏತಾ ನೀರಾವರಿ ಯೋಜನೆಯ ಕಾಲುವೆಗೆ ಎಸೆದು ಪರಾರಿಯಾಗಿದ್ದಾರೆ. 

ಪಾರ್ಕ್ನಲ್ಲಿ ಆಟವಾಡುತ್ತಿದ್ದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸ್ನಿಫರ್ ಡಾಗ್ ಆರೋಪಿಗಳ ಬಳಿ ಕರೆದೊಯ್ಯಿತ್ತು. ಬಳಿಕ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಬಾಲಕಿಯ ಮೃತದೇಹ ಈವರೆಗೂ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಶೀಘ್ರದಲ್ಲೇ ಪತ್ತೆ ಹೆಚ್ಚಲಿದ್ದೇವೆ ಎಂದು ಮುಚ್ಚುಮರ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುಣಶೇಖರ್ ತಿಳಿಸಿದ್ದಾರೆ.