ರಾಜ್ಯ ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದಲ್ಲಿ ಒಂದು ಸಾವಿರ ರೂ.ಗೆ 80 ರೂ. ಲಾಭಾಂಶ (ಬೋನಸ್) ನೀಡಲು ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆ ಅಡಿಯಲ್ಲಿ 2018ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ಕ್ಕೆ ಅಂತ್ಯಗೊಂಡ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡುವ ಕುರಿತು ರಾಜ್ಯ ಸರ್ಕಾರವು ಗುರುವಾರ (ಜುಲೈ 11) ಆದೇಶ ಹೊರಡಿಸಿದೆ.
ಸರ್ಕಾರದ ಮಂಜೂರಾತಿ ಯಾವುದಕ್ಕೆ ?
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ನಿರ್ವಹಿಸುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ, 2018-2020ರ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯನ್ನು ಆಧರಿಸಿ ಈ ಕೆಳಕಂಡಂತೆ ಬೋನಸ್ ನೀಡಲು ಸರ್ಕಾರ ಮಂಜೂರಾತಿಯನ್ನು ನೀಡಿದೆ.
* 01/04/2018ರಿಂದ 31/03/2020ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂಪಾಯಿಯಂತೆ ಲಾಭಾಂಶ (Bonus) ನೀಡುವುದು.
* ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ 01/04/2020ರಿಂದ 31/03/2022ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ.ನಂತೆ ಮಧ್ಯಂತರ ಲಾಭಾಂಶ (Interim Bonus) ನೀಡುವುದು.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇಕಾಗಿದ್ದು, ಅದರನ್ವಯ 2018-2020ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸಲಾಗಿತ್ತೆಂದು ಮತ್ತು ವಿಮಾ ಗಣಕಕಾರರು 2018-2020ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಮೌಲ್ಯಮಾಪನ ವರದಿಯನ್ನು ಸಲ್ಲಿಸಿದ್ದಾರೆಂದು ವರದಿ ಮಾಡಿದ್ದಾರೆ.
ವಿಮಾ ಗಣಕರು ತಮ್ಮ ವರದಿಯಲ್ಲಿ 2020ರ ಮಾರ್ಚ್ 31ರಂದು ಚಾಲ್ತಿಯಲ್ಲಿರುವ ಎಲ್ಲ ಪಾಲಿಸಿಗಳಿಗೆ ಪ್ರತಿ ಸಾವಿರ ರೂ. ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ 80 ರೂ.ನಂತೆ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆಯಾಗಿ ಹೆಚ್ಚಳವಾಗಿರುವ 1769.28 ಕೋಟಿ ರೂ.ನಲ್ಲಿ 1711.89 ಕೋಟಿ ರೂ.ಅನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.57.39 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸು ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರವೀಗ ಅನುಮೋದನೆ ನೀಡಿದೆ.