Hassan Crime: ಹಾಸನ ಎಸ್ಪಿ ಕಚೇರಿಯಲ್ಲೇ ಪತ್ನಿ ಕೊಂದ ಪೊಲೀಸ್‌ ಪೇದೆ, ಕೊಲೆಗೆ ಕಾರಣವೇನು


Hassan: ಪತಿ ವಿರುದ್ದವೇ ದೂರು ನೀಡಲು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಪತ್ನಿಯನ್ನೇ ಪೊಲೀಸ್‌ ಪೇದೆ( Hassan Police) ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ಸೋಮವಾರ ನಡೆದಿದೆ. ಹಾಸನ ನಗರದ ಶಾಂತಿಗ್ರಾಮ ಸರ್ಕಲ್‌ ಇನ್ಸ್‌ಪೆಕ್ಟರ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್‌ ಪೇದೆ ಲೋಕನಾಥ್‌ ಪತ್ನಿ ಮಮತಾ ಕೊಲೆಯಾದವಳು.

ಎಸ್ಪಿ ಕಚೇರಿಯ ಆವರಣದಲ್ಲೇ ಘಟನೆ ನಡೆದಿದ್ದರಿಂದ ಭಯದ ವಾತಾವರಣ ಕಂಡು ಬಂದಿತು. ಕಿರುಕುಳದಿಂದಲೇ ಮಗಳನ್ನು ಲೋಕನಾಥ್‌ ಕೊಲೆ ಮಾಡಿದ್ದಾನೆ ಎಂದು ಮಮತಾ ಪೋಷಕರು ದೂರು ನೀಡಿದ್ಧಾರೆ, ಹಾಸನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಮಮತಾ ಹಾಗು ಲೋಕನಾಥ್ ದಂಪತಿ. ಇಬ್ಬರಿಗೂ ಎರಡು ಗಂಡುಮಕ್ಕಳಿವೆ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು.ಕುಟುಂಬದಲ್ಲಿ ಕೆಲ ವರ್ಷ ಯಾವುದೇ ತೊಂದರೆ ಇರಲಿಲ್ಲ.ಆದರೆ ಕೆಲ ದಿನಗಳಿಂದ ಪತಿ ಹಾಗೂ ಪತ್ನಿ ನಡುವೆ ಹಲವಾರು ವಿಚಾರಗಳಲ್ಲಿ ಮನಸ್ತಾಪ ಉಂಟಾಗಿ ಜಗಳಗಳು ನಡೆಯುತ್ತಿದ್ದವು. ಇದು ಕುಟುಂಬದವರಿಗೂ ತಿಳಿದು ರಾಜೀ ಮಾಡಿಸಿದ್ದರು. ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿತ್ತು. ಕೊನೆಗೆ ಇಬ್ಬರಿಗೂ ಹಿರಿಯ ಅಧಿಕಾರಿಗಳು ಸಮಾಧಾನವನ್ನೂ ಹೇಳಿದ್ದರು. ಈ ನಡುವೆ ನನ್ನ ಮಗಳಿಗೆ ನಿವೇಶನ ಕೊಡಿಸುವಂತೆ ತಂದೆ ಮನೆಯವರಿಗೆ ಹೇಳು, ಹಣ ತಂದುಕೊಡು ಎನ್ನುವ ಒತ್ತಡವನ್ನು ಲೋಕನಾಥ್‌ ಹೇರುತ್ತಿದ್ದ ಆರೋಪಗಳೂ ಕೇಳಿ ಬಂದಿದ್ದವು. ಈ ವಿಚಾರವಾಗಿಯೂ ಜಗಳಗಳು ಆಗಿದ್ದವು. ಎರಡು ದಿನದ ಹಿಂದೆಯೂ ಇದೇ ವಿಚಾರವಾಗಿ ಜಗಳವಾಗಿತ್ತು. ಪತಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಮತಾ ಪೊಲೀಸ್‌ ಅಧೀಕ್ಷಕರಿಗೆ ದೂರು ನೀಡುವಾಗಿಯೂ ಹೇಳಿದ್ದರು.

ಇದೇ ವಿಚಾರವಾಗಿ ಎಸ್ಪಿ ಅವರೊಂದಿಗೆ ಮಾತನಾಡಲು ಮಮತಾ ಬಂದಿದ್ದರು. ಈ ಮಾಹಿತಿ ತಿಳಿದ ಲೋಕನಾಥ್‌ ಕೂಡ ಎಸ್ಪಿ ಕಚೇರಿಗೆ ಧಾವಿಸಿದ್ದರು. ದೂರು ನೀಡುವುದು ಬೇಡ ಎಂದು ಲೋಕನಾಥ್‌ ಹೇಳಿದರೂ ಮಮತಾ ಕೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡ ಲೋಕನಾಥ್‌ ಚಾಕುವಿನಿಂದ ಮಮತಾ ಹೊಟ್ಟೆ, ಎದೆ ಭಾಗಕ್ಕೆ ಹಲವಾರು ಬಾರಿ ತಿವಿದಿದ್ದು, ರಕ್ತ ಸ್ರಾವದಿಂದ ಮಮತಾ ಕುಸಿದಿದ್ದರು. ಕೂಗಿಕೊಂಡ ಶಬ್ದ ಕೇಳಿ ಸಿಬ್ಬಂದಿ ಓಡಿ ಬಂದು ಬಿಡಿಸುವಷ್ಟರಲ್ಲಿ ಮಮತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಲೋಕನಾಥ್‌ ನನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ದ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದಾರೆ. ಪತ್ನಿ ಅನಗತ್ಯ ಕಿರುಕುಳ ನೀಡುತ್ತಿದ್ದಳು. ಎಷ್ಟೇ ಹೇಳಿದರೂ ನಡವಳಿಕೆ ಬದಲಾವಣೆ ಮಾಡಿಕೊಂಡಿರಲಿಲ್ಲ. ಅಲ್ಲದೇ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳುತ್ತಲೇ ಇದ್ದಳು. ಸೋಮವಾರ ಸಹಾ ಅದಕ್ಕೆ ಎಸ್ಪಿ ಕಚೇರಿಗೆ ಬಂದಿದ್ದು, ಈ ಕಾರಣದಿಂದಲೇ ಕೊಲೆ ಮಾಡಿದ್ದಾಗಿ ಲೋಕನಾಥ್‌ ಒಪ್ಪಿಕೊಂಡಿರುವಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ,

ಲೋಕನಾಥ್‌ ಮಾತ್ರವಲ್ಲದೇ ಆತನ ಕುಟುಂಬದ ಸದಸ್ಯರು ನನ್ನ ಮಗಳಿಗೆ ಹಣ ಹಾಗೂ ಆಸ್ತಿಗಾಗಿ ಕಿರುಕುಳ ನೀಡಿದ್ಧಾರೆ. ಇದರಿಂದಲೇ ನನ್ನ ಮಗಳ ಕೊಲೆಯಾಗಿದೆ. ಅವರ ಕುಟುಂಬದವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಿ ಎಂದು ಮಮತಾ ತಂದೆ ಶಾಮಣ್ಣ ದೂರು ನೀಡಿದ್ಧಾರೆ.

ಮಾಹಿತಿ ತಿಳಿದು ಮಮತಾ ಕುಟುಂಬಸ್ಥರು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದ ಬಳಿ ಸೇರಿದ್ದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳು ತಾಯಿಯನ್ನು ಕಳೆದುಕೊಂಡು ಗೋಳಾಡುತ್ತಿದ್ದುದು ಕಂಡು ಬಂದಿತು.