ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಉಪಯೋಗ ಹೆಚ್ಚುತ್ತಿದ್ದು, ಇದು ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುತ್ತಿದೆ. ಆದ್ದರಿಂದ ಮೊಬೈಲ್ ಬಳಸುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದರ ದುಷ್ಪರಿಣಾಮ ಮಕ್ಕಳ ಮೇಲೆ ಬೀರುತ್ತಿದೆಯಲ್ಲದೇ, ಇದರಿಂದ ಕಲಿಕೆಯ ಅಮೂಲ್ಯ ಸಮಯವನ್ನು ಮೊಬೈಲ್ ನಲ್ಲಿ ವ್ಯಯವಾಗುತ್ತಿದೆಯೆಂಬ ಅಂಶ ಇಲಾಖೆಯ ಗಮನಕ್ಕೆ ಬಂದಿದೆ.ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಮೊಬೈಲ್ ನಲ್ಲಿ ಸಂಗೀತ ಕೇಳುವುದು, ಆಟವಾಡುವುದನ್ನು ಮಾಡುತ್ತಿದ್ದು, ಇದರಿಂದ ತರಗತಿಗಳಲ್ಲಿ ಅಹಿತಕರ ವಾತಾವರಣ ಉಂಟಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತದೆ.
ಈ ಸಂಬಂಧ ಪಾಲಕ-ಪೋಷಕರು ಕೂಡಾ ಅನೇಕ ಸಂದರ್ಭಗಳಲ್ಲಿ ಆತಂಕ ವ್ಯಕ್ತಪಡಿಸಿರುತ್ತಾರೆಂಬ ಅಂಶ ಸಭೆಯಲ್ಲಿ ಚರ್ಚೆಯಾಗಿ ಮಕ್ಕಳ ಕಲಿಕಾ ಸಮಯದ ರಕ್ಷಣೆಯ ಕ್ರಮವಾಗಿ ಮೊಬೈಲ್ ಉಪಯೋಗವನ್ನು ನಿಷೇಧಿಸಲಾಗಿದೆ.
ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ (1 ರಿಂದ 10ನೇ ತರಗತಿ ಹಾಗೂ ಪ್ರಥಮ & ದ್ವಿತೀಯ ಪಿಯುಸಿ) ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರತಿಯೊಂದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸುತ್ತದೆ.
ಇದರೊಂದಿಗೆ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಯಾವುದೇ ಸಿಬ್ಬಂದಿ ವರ್ಗದವರು ಕೂಡಾ ಶಾಲಾವಧಿಯಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಉಲ್ಲಂಘಿಸಿ ಮೊಬೈಲ್ ಬಳಸಿದಲ್ಲಿ ಅಂತಹ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗುವುದು.