ಬೆಂಗಳೂರು: ನಾಪತ್ತೆಯಾಗಿದ್ದ (Missing Case) ಕಾನ್ಸ್‌ಟೇಬಲ್ (police constable) ಪಾಳು ಬಾವಿಯಲ್ಲಿ ನಿನ್ನೆ ಸೋಮವಾರ (ಜು.1) ಶವವಾಗಿ (Dead Body Found) ಪತ್ತೆಯಾಗಿದ್ದರು. ಮಡಿವಾಳ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಜ್ ಕಳೆದ ಜೂ.26ರಂದು ನಾಪತ್ತೆ ಆಗಿದ್ದರು.
ಸುಬ್ರಹ್ಮಣ್ಯಪುರ ಠಾಣೆ ಹಾಗೂ ಮಡಿವಾಳ ಠಾಣೆ ಪೊಲೀಸರು ಜಂಟಿಯಾಗಿ ಕಾನ್ಸ್‌ಟೇಬಲ್ ಶಿವರಾಜ್‌ಗಾಗಿ ಹುಡುಕಾಟ ನಡೆಸಿದ್ದೆ ರೋಚಕವಾಗಿತ್ತು. ಶಿವರಾಜ್ ಪತ್ತೆ ಮಾಡಲು ಬರೋಬ್ಬರಿ 250 ಸಿಸಿಟಿವಿ ಪರಿಶೀಲಿಸಿದ್ದರು.
ಕಳೆದ ಐದು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸುಬ್ರಹ್ಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ಸ್ಟೇಷನ್ ವರೆಗೂ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಸಿಸಿಟಿವಿ ಬೆನ್ನು ಹತ್ತಿ ಬಂದಿದ್ದ ಪೊಲೀಸರು ಕೊನೆಗೆ ಜ್ಞಾನಭಾರತಿ ಮೆಟ್ರೊ ಸ್ಟೇಷನ್ ತಲುಪಿದ್ದರು.
ಈ ವೇಳೆ ಮೆಟ್ರೊ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್, ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿಶ್ವವಿದ್ಯಾಲಯದ ಒಳಗೆ ನಡೆದು ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಜು.1ರ ಬೆಳಗ್ಗೆ ಬೆಂಗಳೂರು ವಿವಿ ಆವರಣದೊಳಗೆ ಹುಡುಕಾಡಿದ್ದರು. ಈ ವೇಳೆ ವಿವಿ ಆವರಣದ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿತ್ತು.
ಕೂಡಲೇ ಜ್ಞಾನಭಾರತಿ ಠಾಣೆಗೆ ಮಡಿವಾಳ ಪೊಲೀಸರು ಮಾಹಿತಿ ನೀಡಿದ್ದರು. ಸದ್ಯ ಶಿವರಾಜ್ ಮೃತಪಟ್ಟಿರುವುದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಯಾಕೆಂದರೆ ವಿವಿ ಆವರಣದೊಳಗೆ ಶಿವರಾಜ್ ಒಬ್ಬೊಂಟಿಯಾಗಿ ನಡೆದುಕೊಂಡು ಬಂದಿದ್ದು, ಬೆನ್ನಿಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ. ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರುವುದು ಬೆಳಕಿಗೆ ಬಂದಿದೆ.
ಈ ಮೊದಲು ಕೊಲೆ ಎಂಬುದಾಗಿ ಅನುಮಾನ ವ್ಯಕ್ತವಾಗಿತ್ತು. ಆದರೆ ಸಿಸಿಟಿವಿಯಲ್ಲಿ ಶಿವರಾಜ್ ಒಬ್ಬರೇ ಬಂದಿರುವುದರಿಂದ ಇದೊಂದು ಆತ್ಮಹತ್ಯೆ ಎಂಬುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೂ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ.
ಕೌಟುಂಬಿಕ ಕಾರಣಕ್ಕೆ ಮನನೊಂದು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನವು ಶುರುವಾಗಿದೆ. ಶಿವರಾಜ್ ಸಹೋದರ ಗೌರೀಶ್ ಎಂಬಾತ ಎರಡು ವರ್ಷದ ಹಿಂದೆ ವಾಣಿ ಎಂಬಾಕೆಯನ್ನು ಮದುವೆ ಆಗಿದ್ದರು. ಆದರೆ ಕುಟುಂಬದಲ್ಲಿ ಕಲಹ ಉಂಟಾಗಿ ಪತಿಯಿಂದ ದೂರದ ವಾಣಿ, ವರದಕ್ಷಿಣಿ ಕಿರುಕುಳ ಎಂದು ದಾವಣಗೆರೆಯಲ್ಲಿ ದೂರು ನೀಡಿದ್ದರು. ಈ ನಡುವೆ ವಾಣಿ ಶಿವರಾಜ್‌ಗೆ ಮೇಲಿಂದ ಮೇಲೆ ಫೋನ್ ಮಾಡಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ವಾಣಿ ಕಿರುಕುಳದಿಂದ ಶಿವರಾಜ್ ಬೇಸತ್ತು ಹೋಗಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ