ಚಿಕ್ಕಮಗಳೂರು ಪೊಲೀಸರು ಯೋಗಗುರು ಪ್ರದೀಪ್ ನನ್ನು ಬಂಧಿಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
3 ತಿಂಗಳ ಹಿಂದೆ ಆಶ್ರಮಕ್ಕೆ ಯೋಗ, ಧ್ಯಾನ ಕಲಿಯಲು ಬಂದಿದ್ದ ಅಮೆರಿಕ ಪೌರತ್ವ ಪಡೆದಿರುವ ಪಂಜಾಬ್ ಮೂಲದ ಮಹಿಳಾ ವೈದ್ಯೆ ಮೇಲೆ ಈ ಯೋಗಗುರು ಪ್ರದೀಪ್ನಿಂದ ಅತ್ಯಾಚಾರವೆಸಗಲಾಗಿದೆ. ಈ ಬಗ್ಗೆ ಯೋಗಗುರು ಪ್ರದೀಪ್ ವಿರುದ್ಧ ಎನ್‌ಆರ್‌ಐ ವೈದ್ಯೆ ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೇವಲ ಆಶ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದುಕೊಂಡಿದ್ದ ವೈದ್ಯೆ, 3 ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಬಂದು ನೆಲೆಸಿದ್ದರು.
ಮಲ್ಲೇನಹಳ್ಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೇವಲ ಫೌಂಡೇಷನ್ ಮೂಲಕ ಪ್ರದೀಪ್ ಯೋಗ ತರಬೇತಿ ನೀಡುತ್ತಿದ್ದರು. ಇಲ್ಲಿಗೆ ದೇಶ, ವಿದೇಶದ ಅನೇಕ ಮಂದಿ ಬಂದು ಯೋಗ ಶಿಕ್ಷಣ ಪಡೆಯುತ್ತಿದ್ದರು. ಆನ್ಲೈನ್ ಮೂಲಕವೂ ಯೋಗ ತರಬೇತಿ ನೀಡಲಾಗುತ್ತಿತ್ತು.ಪಂಜಾಬ್ ಮೂಲದ ವೈದ್ಯರೊಬ್ಬರು 2020ರಲ್ಲಿ ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದ ಸಂದರ್ಭ ಅವರ ಸ್ನೇಹಿತರಿಂದ ಕೇವಲ ಯೋಗ ಕೇಂದ್ರದ ಬಗ್ಗೆ ಮಾಹಿತಿ ಸಿಗುತ್ತದೆ. ಅದರಂತೆ ಅಲ್ಪ ಹಣ ನೀಡಿ ಆನ್ಲೈನ್ ತರಗತಿಗೆ ಸೇರಿಕೊಳ್ಳುತ್ತಾರೆ.
ನಂತರ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಪ್ರದೀಪ್ ಹೇಳುತ್ತಾನೆ. ಆ ಪ್ರಕಾರ ಚಿಕ್ಕಮಗಳೂರಿಗೆ ಬಂದು ಆತನ ಕೇಂದ್ರಕ್ಕೆ ಭೇಟಿ ನೀಡಿ 20 ದಿನ ತರಗತಿಯಲ್ಲಿ ಭಾಗಿಯಾಗುತ್ತಾರೆ. ಈ ವೇಳೆ ಆ ವೈದ್ಯೆಯ ಜತೆಗೆ ಸಲುಗೆ ಬೆಳೆಸಿಕೊಂಡು ಇಬ್ಬರು ಕೂಡಾ ಆತ್ಮೀಯರಾಗುತ್ತಾರೆ. ದೈಹಿಕವಾಗಿಯೂ ಆಕೆಯನ್ನು ಬಳಸಿಕೊಳ್ಳುತ್ತಾನೆ ಪ್ರದೀಪ್.ನಂತರ 2020-21ರಲ್ಲೂ ಇಲ್ಲಿಗೆ ಬಂದು ಯೋಗ ತರಗತಿಯಲ್ಲಿ ಆಕೆ ಭಾಗಿಯಾಗುತ್ತಾಳೆ.
ಯೋಗದ ಜತೆಗೆ ದೈಹಿಕ ಸಂಬಂಧವೂ ಮುಂದುವರೆಯುತ್ತದೆ. ಈ ನಡುವೆ ಆತ ಇತರರ ಜತೆಗೂ ಇದೇ ರೀತಿ ಸಂಬಂಧ ಹೊಂದಿದ್ದಾನೆಂಬುದು ಆಕೆಗೆ ಗೊತ್ತಾಗುತ್ತೆ. ಏಕಾಏಕಿ ರೊಚ್ಚಿಗೇಳುವ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡುತ್ತಾಳೆ. ಆತ ನನ್ನ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅಂತ ಆರೋಪಿಸಿದ್ದಾಳೆ. ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.