Darshan: ಉಪ್ಪಿ ಚಿತ್ರಕ್ಕಾಗಿ ಜೈಲಿನಿಂದ 2 ಗಂಟೆ ಪೆರೋಲ್ ಮೇಲೆ ದರ್ಶನ್ ಹೊರಕ್ಕೆ?


ಮಂಗಳೂರು:ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಇವತ್ತಿಗೆ ನ್ಯಾಯಾಂಗ ಬಂಧನ ಮುಗಿಯಲಿದ್ದು ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವ ಪ್ರಯತ್ನ ನಡೀತಿದೆ.

ಬಹಳ ಗಂಭೀರ ಪ್ರಕರಣ ಆಗಿರುವುದರಿಂದ ಸದ್ಯಕ್ಕೆ ನಟ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಪೆರೋಲ್ ಮೇಲೆ ಒಂದೆರಡು ಗಂಟೆ ಅವರನ್ನು ಜೈಲಿನಿಂದ ಹೊರಗೆ ಕರೆತರುವ ಬಗ್ಗೆ ಚರ್ಚೆ ನಡೀತಿದೆ. ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ವ್ಯವಸ್ಥೆ ಮಾಡುವ ಕಸರತ್ತು ಶುರುವಾಗಿದೆ. ಈ ಬಗ್ಗೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಟಿವಿ9 ವಾಹಿನಿಗೆ ಮಾಹಿತಿ ನೀಡಿದ್ದಾರೆ.

3 ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಈ ಸಂಬಂಧ ನಟ ದರ್ಶನ್ ಸೇರಿ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಕೋರ್ಟ್‌ನಲ್ಲಿ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಎಲ್ಲಾ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಇತ್ತೀಚೆಗೆ ಪೊಲೀಸರು ಪ್ರಕರಣ ಸಂಬಂಧ ದರ್ಶನ್ & ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಸಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೋಡಿ ಕೊಲ್ಲಲಾಗಿದೆ ಎನ್ನುವುದನ್ನು ಚಾರ್ಜ್‌ಶೀಟ್‌ನಲ್ಲಿ ಕೂಡ ಉಲ್ಲೇಖಿಸಲಾಗಿದೆ. ಆತನ ಮೇಲೆ ದರ್ಶನ್ ಸಹ ಹಲ್ಲೆ ನಡೆಸಿದ್ದಾರೆ ಎನ್ನುವುದನ್ನು ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು ಸಾಕ್ಷ್ಯಾಧಾರ ಸಮೇತ ತಿಳಿಸಿರುವುದಾಗಿ ವರದಿ ಆಗಿದೆ.

ಸದ್ಯಕ್ಕೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ ಕೂಡ ಅಷ್ಟು ಸುಲಭವಾಗಿ ಸಿಗಲ್ಲ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ರಿಯಲ್ ಸ್ಟಾರ್ 'ಉಪೇಂದ್ರ' ಚಿತ್ರದ 25 ವರ್ಷದ ಸಂಭ್ರಮಾಚರಣೆಗೆ ದರ್ಶನ್ ಕರೆತರುವ ಬಗ್ಗೆ ಚರ್ಚೆ ಶುರುವಾಗಿದೆ. ಸ್ವತಃ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಉಪೇಂದ್ರ' ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರವನ್ನು ಶೀಘ್ರದಲ್ಲೇ ರೀ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೇ ಅಕ್ಟೋಬರ್ 22ಕ್ಕೆ ಸಿನಿಮಾ 25 ವರ್ಷ ಪೂರೈಸಲಿದೆ.

'ಉಪೇಂದ್ರ' ಚಿತ್ರವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಿಸಿದ್ದರು. ಇದೀಗ ನಿರ್ಮಾಪಕರು 25 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಲೆಕ್ಕಾಚಾರ ಶುರುವಾಗಿದೆ. ಇಡೀ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರನ್ನು ಆಹ್ವಾನಿಸಿ ಕಂಡು ಕೇಳರಿಯದಂತೆ ಕಾರ್ಯಕ್ರಮ ನಡೆಸುವ ಆಲೋಚನೆಯಲ್ಲಿದ್ದಾರೆ. ಆ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ವಕೀಲರ ಮೂಲಕ ದರ್ಶನ್‌ಗೆ ಪೆರೋಲ್ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೀತಿದೆ ಎಂದು ಶಿಲ್ಪಾ ಶ್ರೀನಿವಾಸ್ ತಿಳಿಸಿದ್ದಾರೆ. ಇದು ಉದ್ಯಮದ ಹಬ್ಬ. ಉದ್ಯಮದ ಎಲ್ಲರೂ ಭಾಗಿ ಆಗಬೇಕು. ಡೆಪಾಸಿಟ್ ಇಟ್ಟು ದರ್ಶನ್ ಅವರನ್ನು ಪೆರೋಲ್ ಮೇಲೆ ಕರೆತರುವ ಸಾಧ್ಯತೆ ಬಗ್ಗೆ ಚಿಂತಿಸುತ್ತಿದ್ದೇವೆ ಎಂದಿದ್ದಾರೆ.

ಶಿಲ್ಪಾ ಶ್ರೀನಿವಾಸ್ ನಿರ್ಮಾಣದ 'ಇಂಡಿಯನ್' ಚಿತ್ರದಲ್ಲಿ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ನಟಿಸಿದ್ದರು. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅವರ ಕುಟುಂಬದ ಜೊತೆ ಒಳ್ಳೆಯ ಒಡನಾಟ ಇತ್ತು ಎಂದು ಹೇಳಿಕೊಂಡಿದ್ದಾರೆ. ತೂಗುದೀಪ ರಕ್ತದಲ್ಲಿ ಹಿಂಸೆ ಇಲ್ಲ. ಅವರದ್ದು ಸುಸಂಸ್ಕೃತ ಕುಟುಂಬ. ದರ್ಶನ್ ಸರ್ ನಮ್ಮ ಆಫೀಸ್‌ಗೆ ಬಂದು ಕೂರುತ್ತಿದ್ದರು. 5 ಲಕ್ಷ ರೂ. ಬಂಡಲ್ ನೋಡಬೇಕು ಎನ್ನುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.