Mangalore : CPIM ಹಿರಿಯ ನೇತಾರ ಕಾಂ.ರಾಘವ ಅಂಚನ್ ಇನ್ನಿಲ್ಲ


ಮಂಗಳೂರು : CPIM ಹಿರಿಯ ಸದಸ್ಯ ತನ್ನ ಕೊನೆಯ ಕಾಲಾವಧಿವರೆಗೂ ಕಮ್ಯೂನಿಷ್ಟ್ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿರುವ ಕಾಂ.ರಾಘವ ಅಂಚನ್ ಬಜಾಲ್ ( 85 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಕಾಂ ರಾಘವ ಅಂಚನ್ ರವರು ಪತ್ನಿ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಪಕ್ಕಲಡ್ಕ ದಲ್ಲಿ ಹುಟ್ಟಿ ಬೆಳೆದಿರುವ ರಾಘವ ಅಂಚನ್ ರವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ,ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ತಮ್ಮ ಯೌವ್ವನದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು. 


ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ದುಡಿದಿರುವ ರಾಘವ ಅಂಚನ್ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. 1973 ರಲ್ಲಿ ಭೂಮಸೂದೆ ಜಾರಿಗಾಗಿ ರೈತ ಸಂಘಟನೆ ಆಯೋಜಿಸಿದ ಮಂಗಳೂರಿನಿಂದ ಬೆಂಗಳೂರವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬದ್ಧತೆಯುಳ್ಳ ಕಾರ್ಯಕರ್ತರಾಗಿದ್ದರು.