ಮಂಗಳೂರು: ಬಂಟ್ವಾಳ ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯ ವತಿಯಿಂದ ನಡೆದ ಶ್ರೀ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಸಿಹಿತಿಂಡಿ ನೀಡದಂತೆ ಮಂಡಳಿಯಿಂದ ಮಸೀದಿಗೆ ನೀಡಿದ ಪತ್ರವೊಂದು ಇದೀಗ ಚರ್ಚೆಗೆ ಕಾರಣವಾಗಿದ್ದು, ಪರ- ವಿರೋಧದ ಮಾತುಗಳು ಕೇಳಿ ಬರುತ್ತಿದೆ.
ಕಳೆದ ವರ್ಷ ಮೆರವಣಿಗೆಯ ಸಂದರ್ಭದಲ್ಲಿ ತಮ್ಮ ಸಮಾಜ ಬಾಂಧವರು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿದ್ದು, ಇದರಿಂದ ನಮ್ಮ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರಿಂದ ಸಮಾಜದ ಸಾಮರಸ್ಯ ಕೆಡುವ ಆತಂಕವೂ ಇದೆ. ಹೀಗಾಗಿ ಇನ್ನು ಮುಂದೆ ಶೋಭಾಯಾತ್ರೆ ಸಂದರ್ಭದಲ್ಲಿ ಪಾನೀಯ, ಸಿಹಿತಿಂಡಿ ನೀಡದಂತೆ ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮಸೀದಿಗೆ ನೀಡಿದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.