Paralympics 2024: ಜಾವೆಲಿನ್ ಥ್ರೋನಲ್ಲಿ ಐತಿಹಾಸಿಕ ದಾಖಲೆ, ಭಾರತಕ್ಕೆ ಮೊದಲ ಪದಕ; ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನವದೀಪ್!

ಬೆಂಗಳೂರು: ಪ್ಯಾರಾಲಿಂಪಿಕ್ಸ್ ನ ಪುರುಷರ ಜಾವೆಲಿನ್ ಥ್ರೋ F41 ಇವೆಂಟ್‌ನಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರತದ ಪ್ಯಾರಾ ಜಾವೆಲಿನ್ ಎಸೆತಗಾರ ನವದೀಪ್ ಚಿನ್ನದ ಪದಕ ಗೆದ್ದಿದ್ದಾರೆ. ನವದೀಪ್ ತನ್ನ ಮೂರನೇ ಪ್ರಯತ್ನದಲ್ಲಿ 47.32 ಮೀಟರ್ ಎಸೆದಿದ್ದು ಅದು ಅವರ ಅತ್ಯುತ್ತಮ ಎಸೆತವಾಗಿತ್ತು.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕ ಸೇರಿದಂತೆ 29 ಪದಕಗಳನ್ನು ಗೆದ್ದಿದೆ.

ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಫೌಲ್‌ನಿಂದ ಆರಂಭವಾದ ನವದೀಪ್ ನಂತರ ಎರಡನೇ ಪ್ರಯತ್ನದಲ್ಲಿ 46.39 ಮೀಟರ್‌ ದೂರ ಎಸೆದರು. ಆದರೆ, ಮೂರನೇ ಪ್ರಯತ್ನದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಪ್ಯಾರಾಲಿಂಪಿಕ್ ದಾಖಲೆ ಬರೆದರು. ಆದರೆ ಐದನೇ ಯತ್ನದಲ್ಲಿ ಇರಾನ್‌ನ ಬೀತ್ ಸಯಾಹ್ ಸದೇಗ್ 47.64 ಮೀಟರ್ ಎಸೆದು ಹೊಸ ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸುವ ಮೂಲಕ ನವದೀಪ್‌ಗಿಂತ ಮುನ್ನಡೆದಿದ್ದರು.


ಹೀಗಾಗಿ ಮೊದಲಿಗೆ ನವದೀಪ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಬೀತ್ ಸಯಾಹ್ ಸದೇಗ್ ಅನರ್ಹಗೊಂಡಿದ್ದರಿಂದ ನವದೀಪ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇನ್ನು ಇದು ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ದಾಖಲೆಯ ಪದಕವಾಗಿದೆ. ಹೌದು ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದಿದೆ.

ಪ್ಯಾರಾಲಿಂಪಿಕ್ ದಾಖಲೆ ಎಸೆತದೊಂದಿಗೆ ನವದೀಪ್ ಚಿನ್ನದ ಪದಕ ಗೆದ್ದರೆ, ಚೀನಾದ ಸನ್ ಪೆಂಗ್ ಕ್ಸಿಯಾಂಗ್ 44.72 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದರು. ಇನ್ನು ಇರಾಕ್ ನ ವೈಲ್ಡನ್ ನುಖೈಲಾವಿ 40.46 ಮೀಟರ್‌ ದೂರಕ್ಕೆ ಎಸೆದು ಕಂಚಿನ ಪದಕ ಪಡೆದರು.