ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಭಾಷೆ ಈ ತುಳು. ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಈ ತುಳುಭಾಷೆ ಹೆಚ್ಚಾಗಿ ಚಾಲ್ತಿಯಲ್ಲಿದೆ. ಅದಲ್ಲದೇ, ಸರಿಸುಮಾರು ಹತ್ತನೇಯ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದ್ದರು. ಆದರೆ ಇದೀಗ ತುಳುಭಾಷೆಯ ಲಿಪಿ ಯುನಿಕೋಡ್‌ಗೂ ಸೇರ್ಪಡೆಯಾಗಿರುವುದು ತುಳುವರಿಗೆ ಸಂತೋಷವನ್ನುಂಟು ಮಾಡಿದೆ.
ತುಳು ಲಿಪಿಗಿರುವ ಇನ್ನೊಂದು ಹೆಸರಿನ ಮೂಲಕ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದ್ದು, ಇನ್ನು ಮುಂದೆ ತುಳುಲಿಪಿಯಲ್ಲಿಯೇ ಪಠ್ಯಗಳನ್ನು ಓದಬಹುದಾಗಿದೆ. ಸಾಮಾನ್ಯವಾಗಿ ಇಂಗ್ಲಿಷ್, ಕನ್ನಡ ಸೇರಿದಂತೆ ಬೇರೆ ಯಾವ ಭಾಷೆಯಲ್ಲಿ ಶಬ್ದಗಳನ್ನು ಬರೆದರೆ, ಅದನ್ನು ತುಳುವಿನಲ್ಲಿ ಅನುವಾದಿಸುವ ಕೆಲಸವನ್ನು ಈ ಗೂಗಲ್ ಮಾಡುತ್ತದೆ. ಇದೀಗ ತುಳು ಲಿಪಿಯದ್ದೇ ಅಧಿಕೃತ ಫಾಂಟ್ ಕೀಲಿಮಣೆಯಲ್ಲಿ ಲಭ್ಯವಿದ್ದು, ಹೀಗಾಗಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತ್ತರ ಡಿಜಿಟಲ್ ವ್ಯವಸ್ಥೆಯಲ್ಲಿ ತುಳುಲಿಪಿಯನ್ನು ಓದುವ ಅವಕಾಶವೊಂದು ದೊರೆತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ತುಳುವರ ಬಹು ವರ್ಷದ ಕನಸು ಈಡೇರಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಹೆಚ್ಚಿನ ಮಹತ್ವ ಬಂದಿದೆ’ ಎಂದಿದ್ದಾರೆ.
‘ಎ.ಸಿ. ಭಂಡಾರಿ ಅವರು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತುಳು ಲಿಪಿಯನ್ನು ಯೂನಿಕೋಡ್‌ನಲ್ಲಿ ಅಳವಡಿಸಲು 2017ರಲ್ಲಿ ವಿಷಯ ಸಮನ್ವಯತೆಗಾಗಿ ತಜ್ಞರ ಸಮಿತಿ ರಚಿಸಿದ್ದರು. ಇದಕ್ಕೆ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಗಳನ್ನು, ಪರಿಷ್ಕರಣೆಗಳನ್ನು ಕಳುಹಿಸಿದ್ದರು. ಅವರೆಲ್ಲರ ಪ್ರಯತ್ನದ ಫಲವಾಗಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತಾಗಿದೆ’ ಎಂದು ತಿಳಿಸಿದ್ದಾರೆ.
‘ತುಳು ಲಿಪಿಯನ್ನು ಯುನಿಕೋಡ್ ಆಗಿ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ. ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್. ವಿಘ್ನರಾಜ್, ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ. ತುಳು ವಿಕಿಪೀಡಿಯಕ್ಕಾಗಿ ಶ್ರಮಿಸಿದ್ದ ವಿಶ್ವ ಕನ್ನಡ ಸಂಪಾದಕ ಯು.ಬಿ. ಪವನಜ, ‘ಯುನಿಕೋಡ್ ಆವೃತ್ತಿ 16 ರಲ್ಲಿ ತುಳು ಸೇರ್ಪಡೆಯಾಗಿದೆ. ಒಟ್ಟು 80 ಅಕ್ಷರಗಳನ್ನು ಸೇರಿಸಿದ್ದಾರೆ’ ಎಂದು ಹೇಳಿದ್ದಾರೆ.