ಗಂಡನ ಕೊಲೆಗೆ ಖತರ್ನಾಕ್ ಪ್ಲಾನ್ ಮಾಡಿದ್ದ ಪ್ರತಿಮಾ: ರೀಲ್ಸ್ ರಾಣಿಯ ಹೇಳಿಕೆ ಕೇಳಿ ಬೆಚ್ಚಿಬಿದ್ದ ಉಡುಪಿ ಪೊಲೀಸರು


ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಿಲೀಪ್ ಹೆಗ್ಡೆಯನ್ನು ಅಜೆಕಾರು ಪೋಲೀಸರು ಕಸ್ಟಡಿಗೆ ಪಡೆದುಕೊಂಡಿದ್ದು , ಪತ್ನಿ ಪ್ರತಿಮಾಳನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನದ ಕಳುಹಿಸಲಾಗಿದೆ.

ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ಎಲ್ಲಾ ದುಷ್ಟಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಮಧ್ಯರಾತ್ರಿಯೇ ಕೊಲೆಗೆ ಸ್ಕೆಚ್
ಬೆಂಗಳೂರಿನಿಂದ ಆಸ್ಪತ್ರೆಯಿಂದ ಕರೆದುಕೊಂಡು ಬಂದಿದ್ದ ಬಾಲಕೃಷ್ಣ ಅವರನ್ನು ನೋಡಲು ಸಂಬಂಧಿಕರು ದೆಪ್ಪುತ್ತೆಯ ತನ್ನ ಮನೆಗೆ ಜಮಾಯಿಸಿದ್ದರು. ಇದೇ ವೇಳೆ ಪ್ರತಿಮಾ ತನ್ನ ಸಂಬಂಧಿಕರನ್ನು ಹಾಗು ತನ್ನ ಅಣ್ಣನನ್ನು ಕೂಡ ಬೇರೆ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಳು. ತನ್ನ ಮಕ್ಕಳನ್ನು ಕೂಡ ದಸರಾ ರಜೆಯ ಸಂದರ್ಭದಲ್ಲಿ ಮಾನಜೆ ಎಂಬಲ್ಲಿ ತನ್ನ ಅಜ್ಜಿಮನೆಗೆ ಕಳುಹಿಸಿದ್ದಳು ಪ್ರತಿಮಾ. ತನ್ನ ಪ್ರೀತಿಗೆ ಅಡ್ಡಿಯಾಗುತಿದ್ದ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯಲು ಅ.20 ರಾತ್ರಿ 2 ಘಂಟೆಯ ವೇಳೆಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿ ಪತಿಗೆ ತಿಳಿಯಬಾರದೆಂದು ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದಳು. ಗಾಢ ನಿದ್ರೆಯಲ್ಲಿದ್ದ ಬಾಲಕೃಷ್ಣ 2.30 ರ ವೇಳೆ ಅವರನ್ನು ದಿಲೀಪ್ ಹೆಗ್ಡೆ ಬೆಡ್ಶೀಟ್ ನಲ್ಲಿ ಉಸಿರು ಗಟ್ಟಿಸಿ , ಪತ್ನಿ ಪ್ರತಿಮಾ ತನ್ನ ಗಂಡನ ಎದೆ‌ಮೇಲೆ ಹಾಗೂ ಕಾಲನ್ನು ಒದ್ದಾಡದಂತೆ ಅದುಮಿಟ್ಟು ಕೊಲೆ ಮಾಡಿದ್ದಳು. ನಂತರ ಕೊಲೆ ಮಾಡಿ ದಿಲೀಪ್ ಹೆಗ್ಡೆ ಮನೆಯಿಂದ ಕಾಲ್ಕಿತ್ತಿದ್ದನು.

ಮೃತ ಬಾಲಕೃಷ್ಣ ಅವರ ಶವದ ಮೇಲೆ ತುಟಿಯ ಭಾಗ ಹಾಗು ಗಲ್ಲದ ಭಾಗಗಳಲ್ಲಿ ಉಗುರಿನ ಗುರುತುಗಳಿದ್ದು ಮೂಗಿನ ಭಾಗ ಕೆಂಪಗಾಗಿತ್ತು. ಇದರಿಂದ ಅನುಮಾನಗೊಂಡ ಸಂದೀಪ್ ಮೃತಪಟ್ಟ ಬಾಲಕೃಷ್ಣ ಅವರ ಅನುಮಾನ ವ್ಯಕ್ತಪಡಿಸಿ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಮೃತಪಟ್ಟ ಬಾಲಕೃಷ್ಣಗೆ ಪತ್ನಿಯ ಅಕ್ರಮ ಸಂಬಂಧಗಳು ಕೈಗಂಟಾಗಿತ್ತು. ರೀಲ್ಸ್ ಗಳ ಮೂಲಕ ವೈರಲ್ ಅಗಿದ್ದ ಪ್ರತಿಮಾ ಇನ್ಟಾಗ್ರಾಮ್ ಮೂಲಕವೇ ಪ್ರೇಮದ ಆಫರ್ ಗಳು ಬಂದಿದ್ದವು . ಕಳೆದ ಒಂದುವರೆ ವರ್ಷಗಳ ಹಿಂದೆ ಮುಂಬಯಿ ಯುವಕನ ಜೊತೆ ಸಲ್ಲಾಪದ ವೇಳೆ ತನ್ನ ಅಣ್ಣನ ಕೈಗೆ ಸಿಕ್ಕಿಬಿದ್ದು ದೈವದ ಎದುರು ಅಣೆ ಪ್ರಮಾಣವನ್ನು ಮಾಡಿದ್ದಳು. ಬಳಿಕ ಆ ಪ್ರೇಮ ಕೊನೆಯಾದ ಬಳಿಕ ದಿಲೀಪ್ ಹೆಗ್ಡೆ ಪರಿಚಯವಾಗಿ ಸಂಪರ್ಕ ಬೆಳೆಸಿದ್ದಳು. ಇದೇ ವಿಚಾರದಲ್ಲಿ ಬಾಲಕೃಷ್ಣ ಹಾಗು ಪತ್ನಿ ಪ್ರತಿಮಾ, ದಿಲೀಪ್ ಹೆಗ್ಡೆ ವಿರುದ್ಧ ಅಜೆಕಾರು ಪೋಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೂ ಪ್ರತಿಮಾ ತನ್ನ ದಿಲೀಪ್ ಹೆಗ್ಡೆಯ ಪ್ರೇಮ ಪಾಶದಲ್ಲಿ ಬಿದ್ದು ವರಸೆ ಬದಲಾಯಿಸಿರಲ್ಲ. ಇದರಿಂದಾಗಿ ಗಣೇಶ ಚತುರ್ಥಿ ದಿನ ಆಹಾರದಲ್ಲಿ ವಿಷ ಪದಾರ್ಥ ಬಳಸಿ ಕೊಲೆಗೈಯಲು ಪ್ರಯತ್ನಿಸಿದ್ದಳು, ಬಳಿಕ ಪ್ರತಿನಿತ್ಯ ಅನ್ನಕ್ಕೆ ವಿಷಪದಾರ್ಥ ಬೆರೆಸಿ ಕೊಡುತಿದ್ದ ಪ್ರತಿಮಾ ಅನಾರೋಗ್ಯಕ್ಕಿಡಾದ ಪತಿ ಬಾಲಕೃಷ್ಣ ಕಿಡ್ನಿ ಲೀವರ್ ನರಗಳ ಸಂವೇದನೆ ಕಳೆದುಕೊಂಡಿದ್ದನು .
ಏಳಕ್ಕೂ ಹೆಚ್ಚು ಅಸ್ಪತ್ರೆಗಳಿಗೆ ದಾಖಲಿಸಿ ಸಾವಿನ ಕದ ತಟ್ಟಿ ಬದುಕುಳಿದಿದ್ದ ಬಾಲಕೃಷ್ಣ ಬೆಂಗಳೂರಿನಿಂದ ಅಜೆಕಾರಿನ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿ ಪತ್ನಿ ಹಾಗು ಪ್ರಿಯಕರ ಜೊತೆ ಸೇರಿ ಕೊಲೆ‌ಮಾಡಿಸಿದ್ದಳು.

ಮೃತಪಟ್ಟ ಬಾಲಕೃಷ್ಣ ಅವರ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಲೆ ಆರೋಪಿ ಪ್ರತಿಮಾಳ ಅಣ್ಣ ಸಂದೀಪ್ ಅಜೆಕಾರು ಪೋಲೀಸ್ ಠಾಣೆಗೆ ದೂರು ನೀಡಿದ್ದ. ಪೋಸ್ಟ್ ಮಾರ್ಟಂ ಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಪೋಸ್ಟ್ ಮಾರ್ಟಂ ರಿಪೋರ್ಟ್‌ ಇನ್ನೂ ತಲುಪಿಲ್ಲ. ಅದಕ್ಕಾಗಿ ಪೋಲೀಸರು ಕಾಯುತಿದ್ದಾರೆ . ಪೋಸ್ಟ್ ಮಾರ್ಟಂ ರಿಪೋರ್ಟ್‌ ಸಿಗುವ ಮೊದಲೇ ಪತಿ ಬಾಲಕೃಷ್ಣ ರ ಕೊಲೆ ಮಾಡಿದ್ದು ನಾನೆ‌,ದಿಲೀಪ್ ಕೂಡ ಸಾಥ್ ಕೊಲೆಗೆ ಸಾಥ್ ನೀಡಿದ್ದು ಎಂದು ಪತ್ನಿ ಪ್ರತಿಮಾ ಅಣ್ಣನ ಸಂದೀಪ್ ಬಳಿ ತಪ್ಪೊಪ್ಪಿ ಕೊಂಡಿದ್ದಾಳೆ. ಈ ಬಗ್ಗೆ ಅಣ್ಣ ಸಂದೀಪ್ ತಂಗಿ ಪ್ರತಿಮಾಳ ಧ್ವನಿಯನ್ನು ರೆಕಾರ್ಡ್ ಮಾಡಿ ಪೋಲೀಸರಿಗೆ ಒದಗಿಸಿ ಮೃತ ಬಾಲಕೃಷ್ಣರ ಸಾವಿನ ನ್ಯಾಯಕ್ಕಾಗಿ ಕೈಜೋಡಿಸಿದ್ದನು.

ನಾಟಕವಾಡಿದ ಪತ್ನಿ
ಮೃತ ಬಾಲಕೃಷ್ಣ ಅನಾರೋಗ್ಯ ಪೀಡಿತ ನಾಗಿದ್ದ ಸಂದರ್ಭದಲ್ಲಿ ಪತ್ನಿ ಪ್ರತಿಮಾ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಳು. ಸ್ಥಳೀಯರು ಸೇರಿದಂತೆ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಹಣವನ್ನು ಒಟ್ಟು ಗೂಡಿಸಿದ್ದಳು.

ಸ್ವಾಭಿಮಾನಿ ವ್ಯಕ್ತಿಯಾಗಿದ್ದ ಮೃತ ಬಾಲಕೃಷ್ಣ ತನ್ನ ಪತ್ನಿ ಗಾಗಿ ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ಶಾಪ್ ಹಾಕಿಸಿಕೊಟ್ಟಿದ್ದ‌. ತನ್ನ ಪತ್ನಿಯ ಅಕ್ರಮ ಸಂಬಂಧ ಗಳನ್ನು ಪತ್ನಿ ಯ ಅಣ್ಣ ಸಂದೀಪ್ ನಲ್ಲಿ ಹೇಳಿಕೊಳ್ಳುತಿದ್ದ ಬಾಲಕೃಷ್ಣ. .ಈಕೆ ಮದುವೆಯ ಆರ್ಡರ್ ಗಳಿವೆ ಎಂದು ಗಂಡನಿಗೆ ಸುಳ್ಳು ಹೇಳಿ ಮಂಗಳೂರಿನಲ್ಲಿ ದಿಲೀಪ್ ಹೆಗ್ಡೆ ಜೊತೆ ಸುತ್ತಾಟ ನಡೆಸುತಿದ್ದಳು . ಕಾರ್ಕಳದ ಹೋಟೆಲ್ ಉದ್ಯಮಿಯ ಪುತ್ರನಾಗಿರುವ ದಿಲೀಪ್ ಹೆಗ್ಡೆ ಪ್ರತಿಮಾಳಿಗೆ ಮೊಬೈಲ್ ಫೋನ್ ಗಿಫ್ಟ್ ನೀಡಿದ್ದ .

ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ವೇಳೆಯಲ್ಲಿ ಬಾಲಕೃಷ್ಣ ಪತ್ನಿಯ ಚಲನವಲನಗಳನ್ನು ಗಮನಿಸುತಿದ್ದು ಪ್ರಿಯಕರ ದಿಲೀಪ್ ಹೆಗ್ಡೆಯ ಹಾಗೂ ಪ್ರತಿಮಾಳ ಮಾತುಗಳನ್ನು ಕೇಳಿಸಿದ್ದ . ಈ ವಿಚಾರವನ್ನು ತನ್ನ ಗೆಳೆಯರ ಜೊತೆ ಹೇಳ ಬೇಕೆಂದು ಪ್ರಯತ್ನಿಸುತಿದ್ದ ವೇಳೆಯಲ್ಲಿ ಪ್ರತಿಮಾ ಅವಕಾಶ ನೀಡುತ್ತಿರಲಿಲ್ಲ. ಕಳೆದ ಶನಿವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಮನೆಗೆ ಕರೆದುಕೊಂಡು ಬಂದಿದ್ದ ವೇಳೆ ಯಲ್ಲಿ ಬಾಲಕೃಷ್ಣ ತನ್ನ ಸಂಬಂಧಿಕರಿಗೆ ಭಾನುವಾರ ಬರಲು ತಿಳಿಸಿದ್ದ ಆದರೆ, ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಭಾನುವಾರ (ಅ.20) ರಾತ್ರಿಯೇ ಬಾಲಕೃಷ್ಣರನ್ನು ಕೊಲೆ ಮಾಡಿ ಮುಗಿಸಿದ್ದರು.