6 ತಿಂಗಳು ಹಿಂದೆ ಹೂತಿಟ್ಟ ಶವ ಮೇಲಕ್ಕೆ: ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕಳೆದ ಮೇ 12 ರಂದು ಸಾಪ್ರೀನ್ ವಂಟಿ ಎನ್ನುವ 10 ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಕುಟುಂಬಸ್ಥರು ತಮ್ಮದೆ ಜಮೀನಿನಲ್ಲಿ ಶವವನ್ನ ಹೂತು ಅಂತ್ಯಕ್ರಿಯೆ ನೆರವೇರಿಸಿದ್ದರು. ಆದ್ರೆ ಇದಾಗ 6 ತಿಂಗಳ ಬಳಿಕ ಮತ್ತೆ ಬಾಲಕಿಯ ಶವವನ್ನ ಹೊರ ತೆಗೆದು ಶವಪರೀಕ್ಷೆ ಪಡೆಸಲಾಗಿದೆ. ವಿಜಯಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಹಬೀದ್ ಗದ್ಯಾಳ ನೇತೃತ್ವದಲ್ಲಿ ಬಾಲಕಿಯ ಶವ ಪರೀಕ್ಷೆ ನಡೆಸಲಾಯಿತು.
ಈಗ ಯಾಕೆ ಶವಪರೀಕ್ಷೆ?: ಅಷ್ಟಕ್ಕೂ 6ತಿಂಗಳ ಹಿಂದೆ ಹಾವು ಕಚ್ಚಿ ಸಾವನ್ನಪ್ಪಿದ ಬಾಲಕಿಯ ಶವಪರೀಕ್ಷೆ ಈಗ ಯಾಕೆ ಎನ್ನುವ ಕುತೂಹಲದ ಪ್ರಶ್ನೆಗಳು ಮೂಡುತ್ವೆ. ಇದಕ್ಕೆ ಕಾರಣ ಬಾಲಕಿಯ ಸಾವಿನ ಬಗ್ಗೆ ಉಂಟಾಗಿರುವ ಅನುಮಾನಗಳು. ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಲ್ಲ ಬದಲಿಗೆ ಇದೊಂದು ವ್ಯವಸ್ಥಿಯ ಕೊಲೆ ಎನ್ನುವ ಆರೋಪ ಬಾಲಕಿ ತಂದೆ ಸಲೀಂ ವಂಟಿ ಹಾಗೂ ತಾಯಿ ಶಬಾನಾರ ಗಂಭೀರ ಆರೋಪವಾಗಿದೆ. 6 ತಿಂಗಳ ಹಿಂದೆ ತಮ್ಮ ಮಗಳನ್ನ ಕರೆಂಟ್ ನೀಡಿ ಸಂಬಂಧಿಕರೆ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಬಾಲಕಿ ಬಳಿಕ, ತಾಯಿಯ ಹತ್ಯೆಗು ಯತ್ನ?: ಮೇ 12 ರಂದು ಬಾಲಕಿ ಸಾಪ್ರೀನ್ ಸಾವನ್ನಪ್ಪಿದ್ದಳು. ಆದ್ರೆ ಹಾವು ಕಚ್ಚಿದೆ ಎಂದು ಭಾವಿಸಿ ಕುಟುಂಬಸ್ಥರು ಮಣ್ಣು ಮಾಡಿದ್ದರು. ಆದ್ರೆ 2 ತಿಂಗಳ ಬಳಿಕ ಅಂದ್ರೆ ಜುಲೈ 7 ರಂದು ಬಾಲಕಿಯ ತಾಯಿ ಶಾಬಾನಾಗೆ ಸಹೋದರ ಸಂಬಂಧಿಗಳಿಂದ ಒತ್ತಾಯಪೂರ್ವಕವಾಗಿ ವಿಷ ಉಣಿಸಲು ಯತ್ನ ನಡೆದಿತ್ತಂತೆ. ಈ ವೇಳೆ ವಿಷ ಹಾಕುತ್ತಿದ್ದ ಸಹೋದರ ಸಂಬಂಧಿಕ ಮಹಮ್ಮದ್ ವಂಟಿ ಹಾಗೂ ಆತನ ತಾಯಿ ರಜಾಕ್‌ಮಾ ನಿನ್ನ ಮಗಳಿಗೆ ಕರೆಂಟ್ ಕೊಟ್ಟು ಸಾಯಿಸಿದ್ದೇವೆ. ಅಂದೆ ನಿನ್ನನ್ನು ಕೊಲ್ಲುತ್ತಿದ್ದೇವು, ಆಗಲಿಲ್ಲ ಈಗ ಸಮಯ ಸಿಕ್ಕಿದೆ ಎಂದು ಹೇಳುತ್ತಲೆ ಬಾಟಲಿಯಲ್ಲಿದ್ದ ವಿಷ ಉಣಿಸಿದ್ದಾರಂತೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ.
ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಶಾಬಾನಾ ನಡೆದ ಘಟನೆ ವಿವರಿಸಿದ್ದಳು. ಈ ವೇಳೆ ಮಗಳು ಸತ್ತಿದ್ದು ಹಾವು ಕಚ್ಚಿದ್ದರಿಂದಲ್ಲ ಬದಲಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರವನ್ನ ಶಾಬಾನಾ ಬಾಯ್ಬಿಟ್ಟಿದ್ದಳು. ಶಾಬಾನ ವಿಷ ಪ್ರಾಶನವಾದ ಸಮಯ ಮಾತನಾಡಿದ ವಿಡಿಯೋ ದೃಶ್ಯಗಳನ್ನ ಪತಿ ಸಲೀಂ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ.
ಬಾಲಕಿ ಶವ ಪರೀಕ್ಷೆಗೆ ಡಿಜಿ ಆದೇಶ: ಬಾಲಕಿ ಸಾಪ್ರೀನ್ ಸಾವು ಅಸಹಜ ಎನ್ನವ ವಿಚಾರವಾಗಿ ಸಂಬಂಧಿಕರ ವಿರುದ್ಧ ದೂರು ನೀಡಲು ಚಡಚಣ ಠಾಣೆಗೆ ತಂದೆ ಸಲೀಂ ತಾಯಿ ಶಾಬಾನಾ ಹೋಗಿದ್ದರು. ಆದ್ರೆ ಪೊಲೀಸರು ದೂರು ಸ್ವೀಕರಿಸಿಲ್ಲ, ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಸಲೀಂ ದೂರಿದ್ದಾರೆ. ಬಳಿಕ ಮಗಳ ಸಾವಿನ ಬಗ್ಗೆ ಇದ್ದ ಅನುಮಾನ ಹಾಗೂ ಪತ್ನಿಯ ಹತ್ಯೆಗೆ ನಡೆದ ಯತ್ನ ಬಗ್ಗೆ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು ಸಾಪ್ರೀನ್ ಶವ ಪರೀಕ್ಷೆಗೆ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಮೊನ್ನೆಯಷ್ಟೆ ಶವ ಪರೀಕ್ಷೆ ನಡೆದಿದೆ. ಶವ ಪರೀಕ್ಷೆಯ ವರದಿ ಬಂದ ಮೇಲೆ ಅಸಲಿ ವಿಚಾರ ಬಯಲಿಗೆ ಬರಲಿದೆ.