ರಾಜ್ಯೋತ್ಸವ ಪ್ರಶಸ್ತಿಗೆ ಕರೆಸಿ ಕೊನೇ ಕ್ಷಣದಲ್ಲಿ ಕೈಬಿಟ್ಟು ಅವಮಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು! ಅತ್ತ ರಾಜ್ಯ ಪ್ರಶಸ್ತಿಯೂ ಇಲ್ಲ... ಇತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲ...


ಮಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಕೊಡಮಾಡುವ ಸುವರ್ಣ ಮಹೋತ್ಸವ ಪ್ರಶಸ್ತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ಪ್ರಶಸ್ತಿ ನೀಡದೇ ಕೈಬಿಟ್ಟು ಅವಮಾನ ಮಾಡಿದೆ.


ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಇದೆ ಎಂದು ನಿನ್ನೆಯೇ ಕರೆ ಮಾಡಿ ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ಕರೆಸಿದ್ದರು. ಬೆಂಗಳೂರಿಗೆ ಕರೆಸಿ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಕೂಡ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಇಂದು ಸಂಜೆ ಪ್ರಶಸ್ತಿ ವಿತರಣೆ ವೇಳೆ ಕೊನೇ ಕ್ಷಣದಲ್ಲಿ ಬಾಬು ಪಿಲಾರ್ ಗೆ ಪ್ರಶಸ್ತಿ ಇಲ್ಲ ಎಂದಿದ್ದಾರೆ. ಹೆಸರು ತಪ್ಪಿದೆ ಎಂದು ಸಮಜಾಯಿಷಿ ನೀಡಿ ಪ್ರಶಸ್ತಿ ಕೈಬಿಟ್ಟು ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ.

ಬಾಬು ಪಿಲಾರ್ ಬದಲು ಬಾಬು‌ ಕಿಲಾರ್ ಆಗಬೇಕಿತ್ತು ಎಂದು ಸಮಜಾಯಿಷಿ ನೀಡಿದ ಅಧಿಕಾರಿಗಳು, ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ ಅಂತ ಹೇಳಿ ಬಾಬು ಪಿಲಾರ್ ರನ್ನು ಕೈ ಬಿಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ನಿನ್ನೆ ಬಾಬು ಪಿಲಾರ್ ಗೆ ಕರೆ ಮಾಡಿ ಬೆಂಗಳೂರಿಗೆ ಬರ ಹೇಳಿದ್ದರು. ಕುಮಾರ ಕೃಪಾದಲ್ಲಿ ಕೊಠಡಿ ಕೂಡ ಕೊಟ್ಟು ಇಂದು ಪ್ರಶಸ್ತಿ ಸ್ವೀಕರಿಸಲು ಮಾಹಿತಿ ನೀಡಿದ್ದರು. ಆದರೆ ಕುಮಾರ ಕೃಪಾ ಬಳಿ ಬಸ್ ಹತ್ತುವ ವೇಳೆ ನಿಮಗೆ ಪ್ರಶಸ್ತಿ ಇಲ್ಲ ಅಂತ ಹೇಳಿ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ.

ಮತ್ತೊಬ್ಬರು ಬಾಬು ಕಿಲಾರ್ ಎಂಬವರಿಗೆ ಪ್ರಶಸ್ತಿ ಬಂದಿರೋದು, ನಿಮಗಲ್ಲಾ ಅಂತ ಅಪಮಾನ ಮಾಡಿದ್ದಾರೆ. ಇನ್ನು ದ.ಕ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೂ ಬಾಬು ಪಿಲಾರ್ ಆಯ್ಕೆಯಾಗಿದ್ದು, ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದರು. ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಂಕೀರ್ಣ ವಿಭಾಗದಲ್ಲಿ ಬಾಬು ಕಿಲಾರ್ ಹೆಸರು ಘೋಷಣೆಯಾಗಿತ್ತು. ಅದು ಬಾಬು ಪಿಲಾರ್ ರದ್ದೇ ಎಂದು ಬೆಂಗಳೂರಿಗೆ ಕರೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಪಮಾನ ಆಗಿದೆ ಎಂದು ದೂರಲಾಗಿದೆ.‌

ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲದೇ ರಾಜ್ಯ ಪ್ರಶಸ್ತಿಯೂ ಇಲ್ಲದೇ ಬೆಂಗಳೂರಿನಲ್ಲಿ ಬಾಬು ಪಿಲಾರ್ ಏಕಾಂಗಿಯಾದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಕ್ಷೇತ್ರ ಉಳ್ಳಾಲದ ಸಮಾಜ ಸೇವಕರಾಗಿರೋ ಬಾಬು ಪಿಲಾರ್, ಅಸಂಖ್ಯಾತ ಪಾರ್ಥೀವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.