ಹೌದು, ಅಸಲಿಗೆ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಪ್ರಮುಖ ಹೀರೋ ಆಗಿ ಗುರುತಿಸಿಕೊಂಡಿರುವ ರಿತೇಶ್ ದೇಶಮುಖ್ ಮಹಾರಾಷ್ಟ್ರದ ಹದಿನಾಲ್ಕನೇ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ಅವರ ಮಗ ಕೂಡ ಹೌದು. ಇನ್ನೂ ರಿತೇಶ್ ದೇಶಮುಖ್ ಅವರ ಸಹೋದರರಾದ ಧೀರಜ್ ದೇಶಮುಖ್ ಮತ್ತು ಅಮಿತ್ ದೇಶಮುಖ್ ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡವರು. ಕಾಂಗ್ರೆಸ್ ಪಕ್ಷದಿಂದ ಕಾಲ ಕಾಲಕ್ಕೆ ಚುನಾವಣೆಗೆ ನಿಂತವರು.
ಹೀಗೆ ರಾಜಕೀಯ ಪರಿಸರದಲ್ಲಿ ಬೆಳೆದ ಕಾರಣಕ್ಕೆ ರಾಜಕೀಯ ಇವರ ರಕ್ತದಲ್ಲಿಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ರಿತೇಶ್ ದೇಶಮುಖ್ , ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಮಹಾರಾಷ್ಟ್ರದ ಲಾತೂರ್ ಗ್ರಾಮಾಂತರ್ ಪ್ರದೇಶದಿಂದ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಅಖಾಡಕ್ಕೆ ಧುಮುಕಿರುವ ತಮ್ಮ ಸಹೋದರ ಧೀರಜ್ ದೇಶಮುಖ್ ಪರವಾಗಿ ಪ್ರಚಾರವನ್ನು ಮಾಡಿದ್ದಾರೆ. ಪ್ರಚಾರದ ಸಮಯದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಧರ್ಮ ಅಲ್ಲ ನಿಮ್ಮ ಪಕ್ಷ ಅಪಾಯದಲ್ಲಿ ಇದೆ ಎಂದು ತಮ್ಮ ಭಾಷಣದಲ್ಲಿ ಹೇಳಿರುವ ರಿತೇಶ್ ವಾಸ್ತವವಾಗಿ ಯಾರು ನಮ್ಮ ಧರ್ಮ ಅಪಾಯದಲ್ಲಿ ಇದೆ ಎನ್ನುತ್ತಾರೋ ಅದು ನಿಜವಲ್ಲ. ಯಾವ ಧರ್ಮವೂ ದೇಶದಲ್ಲಿ ಅಪಾಯದಲ್ಲಿ ಇಲ್ಲ. ಅಪಾಯದಲ್ಲಿ ಇರುವುದು ಈ ರೀತಿ ಪ್ರಚಾರ ಹಾಗೂ ಧರ್ಮದ ಹೆಸರಿನಲ್ಲಿ ಮತ ಹಾಕುವಂತೆ ಕೇಳುತ್ತಿದ್ದಾರಲ್ಲ ಅವರ ಪಕ್ಷ ಮಾತ್ರ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸಲಿದೆ ಎನ್ನುವ ಮಾತನ್ನು ಪ್ರಚಾರದ ಸಮಯದಲ್ಲಿ ನೆನಪು ಮಾಡಿಕೊಂಡಿರುವ ರಿತೇಶ್ ದೇಶಮುಖ್, ನಾನು ನನ್ನ ಧರ್ಮದ ಬಗ್ಗೆ ನಂಬಿಕೆ ಹಾಗೂ ಗೌರವವನ್ನು ಹೊಂದಿದ್ದೇನೆ. ಆದರೆ, ಯಾರು ಧರ್ಮ ಅಪಾಯದಲ್ಲಿ ಇದೆ ಎಂದು ಹೇಳುತ್ತಿದ್ದಾರೋ ಅವರ ಮಾತುಗಳನ್ನು ನಂಬುವ ಅವಶ್ಯಕತೆ ಇಲ್ಲ. ಭ್ರಮೆಗಳಿಗೆ ಬಲಿಯಾಗಬೇಡಿ ಎಂದಿದ್ದಾರೆ.
ಮುಂದುವರೆದು ಪ್ರತಿಯೊಬ್ಬ ವ್ಯಕ್ತಿಯೂ ಧರ್ಮವನ್ನು ಪಾಲಿಸಬೇಕು ಹಾಗೂ ಪ್ರೀತಿಸಬೇಕು. ಆದರೆ, ಯಾವುದಾದರೂ ಪಕ್ಷ ಧರ್ಮ ಅಪಾಯದಲ್ಲಿ ಇದೆ ಎಂದರೆ ನಂಬಲೇ ಬಾರದು ಎಂದಿರುವ ರಿತೇಶ್ ದೇಶಮುಖ್, ಶ್ರೀಕೃಷ್ಣ ಹೇಳಿರುವಂತೆ ಮಾಡುವ ಕೆಲಸವೇ (ಕರ್ಮ) ಧರ್ಮವಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಧರ್ಮ ಪಾಲನೆ ಮಾಡುವವರು ಎಂದು ಕರೆಯುತ್ತಾರೆ ಎಂದಿದ್ದಾರೆ. ಧರ್ಮದ ಬಗ್ಗೆ ಮಾತನಾಡುವವರಿಗೆ ನಮ್ಮ ಧರ್ಮವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಎಂದಿದ್ದಾರೆ. ಇನ್ನು
ಇದೇ ಸಮಯದಲ್ಲಿ ನಿರುದ್ಯೋಗದ ಕುರಿತು ಕೂಡ ಮಾತನಾಡಿರುವ ರಿತೇಶ್ ದೇಶಮುಖ್ ಮಹಾರಾಷ್ಟ್ರದಲ್ಲಿ ಲಾತೂರ್ ಮಾದರಿ ಶಿಕ್ಷಣ ಪ್ರಸಿದ್ಧಿ ಗಳಿಸಿದೆ. ಆದರೆ, ಇಲ್ಲಿ ವಿದ್ಯಾಭ್ಯಾಸ ಪೂರೈಸಿರುವವರಿಗೆ ಉದ್ಯೋಗಾವಕಾಶಗಳೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.ಸದ್ಯಕ್ಕೆ ರಿತೇಶ್ ದೇಶಮುಖ್ ಅವರ ಈ ಭಾಷಣ ಅನೇಕರ ಗಮನ ಸೆಳೆಯುತ್ತಿದೆ. ಭಾಷಣದ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ರಿತೇಶ್ ದೇಶಮುಖ್ ವಿರುದ್ಧ ಬಿಜೆಪಿ ಬೆಂಬಲಿಗರು ಹರಿಹಾಯುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.