ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: RSS ಮುಖಂಡ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು


ಬೆಂಗಳೂರು: ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆ ಸಾಗರದ ವರದಳ್ಳಿ ರಸ್ತೆಯ ವನಶ್ರೀ ವಸತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ಆರ್‌ಎಸ್‌ಎಸ್‌ ಮುಖಂಡ ಹೆಚ್‌.ಪಿ. ಮಂಜಪ್ಪ ವಿರುದ್ದ ಬುಧವಾರ (ನ.6) ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ವಿದ್ಯಾರ್ಥಿನಿ ವನಶ್ರೀ ವಸತಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ನಾಲ್ಕು ತಿಂಗಳಿನಿಂದ ಶಾಲೆಯ ಮುಖ್ಯಸ್ಥ ಮಂಜಪ್ಪ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಂಜಪ್ಪ ವಿರುದ್ದ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಪೋಷಕರೊಂದಿಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ ದೂರು ದಾಖಲಿಸಿದ್ದಾಳೆ. ವನಶ್ರೀ ಸಂಸ್ಥೆಗೆ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಆರೋಪಿ ಮಂಜಪ್ಪ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕಳೆದ ವರ್ಷ ಬಂಧಿನಕ್ಕೊಳಗಾಗಿದ್ದ ಮಂಜಪ್ಪ

ಕಳೆದ ವರ್ಷದ ಜೂನ್‌ ಮೊದಲ ವಾರದಲ್ಲಿ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಎಂಬಾಕೆ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಳು. ಆಕೆಗೆ ಭಾರೀ ಪ್ರಮಾಣದಲ್ಲಿ ನೀರು ಕುಡಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿ ಬಾಲಕಿಯ ಸಹಪಾಠಿಗಳು ಹೇಳಿದ್ದರು. ಇಲ್ಲೂ ಮೃತ ಬಾಲಕಿಗೆ ಮಂಜಪ್ಪ ಲೈಂಗಿಕ ನೀಡಿದ್ದ ಆರೋಪವಿತ್ತು. ಆ ಬಳಿಕ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಮಂಜಪ್ಪ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡಿರುವ ಹೆಚ್‌.ಪಿ ಮಂಜಪ್ಪ, ವನಶ್ರೀ ಮಂಜಪ್ಪ ಎಂದೇ ಹೆಸರಾಗಿದ್ದಾನೆ. ಈತನ ವಿರುದ್ದ ವಸತಿ ಶಾಲೆಯ ಬಾಲಕಿಯರು, ಕೆಲಸದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪಗಳಿವೆ.