ಬಳಿಕ ತಿಥಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಕುಟುಂಬಸ್ಥರು, ಸ್ಥಳೀಯರನ್ನು ಆಹ್ವಾನಿಸಿದ್ದಾರೆ. ತಿಥಿ ದಿನ ಆಗಮಿಸಿದ ಜನರು ಮಧ್ಯಾಹ್ನ ಊಟಕ್ಕೆ ಕುಳಿತಿದ್ದಾರೆ. ಖಾದ್ಯಗಳನ್ನು ಬಡಿಸುತ್ತಿರುವಾಗ ಇದೇ ಬ್ರಿಜೇಷ್ ಸುಥರ್ ನಡೆದುಕೊಂಡು ತನ್ನದೇ ತಿಥಿಗೆ ಆಗಮಿಸಿದ ಘಟನೆ ನಡೆದಿದೆ. ನೆರದಿದ್ದ ಜನ ಕಕ್ಕಾಬಿಕ್ಕಿಯಾಗಿದ್ದಾರೆ. ಬಾಯಲ್ಲಿಟ್ಟ ಆಹಾರ ನುಂಗಬೇಕೋ? ಉಗಳಬೇಕೋ ಅನ್ನೋದು ತಿಳಿಯದಾಗಿದೆ. ಕುಟುಂಬಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದ ಈ ಘಟನೆ ಗುಜರಾತ್‌ನ ಮೆಹ್ಸನ ಜಿಲ್ಲೆಯ ನರೋದ ಬಳಿ ನಡೆದಿದೆ.
ಬ್ರಿಜೇಶ್ ಸುಥರ್ ಹಲವು ಕಂಪನಿ, ಉದ್ಯಮಗಳಲ್ಲಿ ಕೆಲಸ ಮಾಡಿ ಬಳಿಕ ಷೇರುಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದರು. ಷೇರು ಖರೀದಿ ಮಾರಾಟದ ಮೂಲಕ ಪ್ರತಿ ದಿನ ಟ್ರೇಡಿಂಗ್ ಮಾಡುತ್ತಾ ಜೀವನ ಸಾಗಿತ್ತು. ಆದರೆ ಮಾರುಕಟ್ಟೆಯ ಏರಿಳಿತದಿಂದ ಬ್ರಿಜೇಷ್ ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದರು. ಅಪಾರ ನಷ್ಟ ಅನುಭವಿಸಿದ ಬ್ರಿಜೇಷ್ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಬ್ರಿಜೇಷ್ ಸ್ಥಿತಿ ನೋಡಿ ಕುಟುಂಬಸ್ಥರು ಆತಂಕಗೊಂಡಿದ್ದರು. ಬ್ರಿಜೇಷ್ ತಾಯಿ ಧೈರ್ಯ ತುಂಬಿದ್ದರೂ ಬ್ರಿಜೇಶ್ ಮಾತ್ರ ಕುಗ್ಗಿ ಹೋಗಿದ್ದರು.
Read more: ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ರವರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ,
ಹೀಗಿರುವಾಗ ಅಕ್ಟೋಬರ್ 27 ರಂದು ಬ್ರಿಜೇಶ್ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದರು. ನಷ್ಟದ ಪರಿಣಾಮ ಮನೆಯಿಂದ ಹೊರಗೆ ಬಾರದ ಬ್ರಿಜೇಷ್ ನಾಪತ್ತೆ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿತ್ತು. ಅಕ್ಟೋಬರ್ 27ರ ಇಡೀ ದಿನ ಹುಡುಕಾಟ ನಡೆಸಿದ್ದರು. ಕುಟುಂಬಸ್ಥರು, ಸ್ಥಳೀಯರು ಸೇರಿ ಹುಡುಕಾಡಿದರೂ ಸಿಗಲಿಲ್ಲ. ಬಳಿಕ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ಮುಂದುವರಿಸಿದ್ದರು.
ಅಕ್ಟೋಬರ್ ತಿಂಗಳು ಮುಗಿದು ನವೆಂಬರ್ ಆಗಮಿಸಿದರೂ ಬ್ರಿಜೇಷ್ ಸುಥರ್ ಪತ್ತೆಯಾಗಲಿಲ್ಲ. ಪೊಲೀಸರು ಸುತ್ತ ಮುತ್ತಲಿನ ಠಾಣೆಗೆ ಸೂಚನೆ ನೀಡಿದ್ದರು. ಸಿಸಿಟಿವಿ ದೃಶ್ಯ ಪರಿಶೀಲನೆಯನ್ನು ನಡೆಸಿದ್ದರು. ಆಧರೆ ಬ್ರಿಜೇಶ್ ಸುಳಿವು ಸಿಗಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬ್ರಿಜೇಷ್ ಪತ್ತೆಯಾಗಲೇ ಇಲ್ಲ. ಇದರ ನಡುವೆ ನವೆಂಬರ್ 10 ರಂದು ಸಬರಮತಿ ನದಿ ಸೇತುವೆ ಬಳಿ ಕೊಳೆತ ಮೃತದೇಹವೊಂದು ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ ಬ್ರಿಜೇಶ್ ಸುಥರ್ ಕುಟುಂಬಸ್ಥರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಗುರುತ ಪತ್ತೆಗೆ ಸೂಚನೆ ನೀಡಲಾಗಿತ್ತು.
ಕುಟುಂಬಸ್ಥರು ಆಗಮಿಸಿ ಇದು ಬ್ರಿಜೇಷ್ ಸುಥರ್ ಮೃತದೇಹ ಎಂದು ಖಚಿತಪಡಿಸಿದ್ದರು. ದೇಹದ ತೂಕ, ಎತ್ತರ, ಚಪ್ಪಲಿ ಸೇರಿದಂತೆ ಕೆಲ ಆಧಾರಗಳ ಮೇಲೆ ಕುಟುಂಬಸ್ಥರು ಖಚಿತಪಡಿಸಿದ್ದರು. ಕಾನೂನು ಪ್ರಕ್ರಿಯೆ ಮುಗಿಸಿ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದ್ದರು. ಇತ್ತ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಹಿಂದೂ ಪದ್ಧತಿಯಂತೆ ಮೃತ ಬಿಜೇಷ್ ಸುಥರ್ ತಿಥಿಯನ್ನು ನವೆಂಬರ್ 14ಕ್ಕೆ ಆಯೋಜಿಸಲಾಗಿತ್ತು. ಬ್ರಿಜೇಶ್ ಸುಥರ್ ಅವರ ಜನನ ಮರಣ ದಿನಾಂಕದ ದೊಡ್ಡ ಫೋಟೋವನ್ನು ಕುಟುಂಬಸ್ಥರು ಫ್ರೇಮ್ ಹಾಕಿಸಿದ್ದರು. ಇತ್ತ ಸ್ಥಳೀಯರು ಬ್ಯಾನರ್ ಪ್ರಿಂಟ್ ಹಾಕಿ ಗ್ರಾಮದಲ್ಲಿ ಹಾಕಿದ್ದರು. ತಿಥಿ ದಿನ ಎಲ್ಲರೂ ಆಗಮಿಸಿದ್ದಾರೆ. ಊಟದ ಸಮಯವಾಗಿದೆ. ಊಟಕ್ಕೆ ಕುಳಿತವರಿಗೆ ಆಹಾರ ಬಡಿಸುವಾಗ ಸತ್ತಿದ್ದಾನೆಂದ ವ್ಯಕ್ತಿ ಬ್ರಿಜೇಷ್ ನೇರವಾಗಿ ನಡೆದುಕೊಂಡು ಮನೆಗೆ ಆಗಮಿಸಿದ್ದಾನೆ.
ಬ್ರಿಜೇಷ್ ನೋಡಿದ ಜನ ಕಂಗಾಲಾಗಿದ್ದಾರೆ. ಇತ್ತ ಕುಟುಂಬಸ್ಥರು ಬೆಚ್ಚಿದ್ದಾರೆ. ಅರೇ ಇದೇನು ಎಂದು ಗಾಬರಿಯಾಗಿದ್ದಾರೆ. ಮಾನಸಿಕವಾಗಿ ಕುಗ್ಗಿ ಹೋದ ಕಾರಣ ಎಲ್ಲೆಲ್ಲಾ ಹೋಗಿದ್ದಾನೆ ಅನ್ನೋದು ಬ್ರಿಜೇಷ್‌ಗೂ ತಿಳಿಯದಾಗಿದೆ. ಆದರೆ ಮನೆಯಿಂದ ನಾಪತ್ತೆಯಾದ ಬಳಿಕ ಅನುಭವಿಸಿದ ಸಂಕಷ್ಟದಿಂದ ಈತನ ಅಸ್ವಸ್ಥತೆ ಮರೆತುಹೋಗಿದೆ. ಹೀಗಾಗಿ ಮರಳಿದ್ದಾನೆ. ಇದೀಗ ಪೊಲೀಸರು ಹಾಗಾದರೆ ಸಬರಮತಿ ಸೇತುವೆ ಬಳಿ ಸಿಕ್ಕ ಮೃತದೇಹ ಯಾರದ್ದು ಅನ್ನೋದು ತಲೆಕೆಡಿಸಿಕೊಂಡಿದ್ದಾರೆ.