2024 ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ (Wayand Loksabha) ಶೇಕಡಾ 73.57 ರಷ್ಟು ಮತದಾನವಾಗಿತ್ತು. ಆಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಒಟ್ಟು 6,47,445 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಅನ್ನಿ ರಾಜಾ 2,83,023 ಮತಗಳಿಗೆ ಸೀಮಿತರಾಗಿದ್ದರು. ಅದೇ ರೀತಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಕೇವಲ 1,41,045 ಮತಗಳನ್ನು ಪಡೆದರು.
2024ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ 3.65 ಲಕ್ಷ ಮತಗಳ ದಾಖಲೆಯನ್ನು ಮುರಿದು ತನ್ನದೇ ಹೊಸ ದಾಖಲೆ ಬರೆದಿರುವ ಪ್ರಿಯಾಂಕಾ ಗಾಂಧಿ(Priyanka Gandhi), ಬರೋಬ್ಬರಿ 5 ಲಕ್ಷ ಮತಗಳ ಅಂತರದಿಂದ ಇದೀಗ ಗೆಲುವಿನ ಪತಾಕೆ ಹಾರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.
ಗಾಂಧಿ ಕುಟುಂಬದ ಅದೃಷ್ಟ ಎಂದು ಪರಿಗಣಿಸಲಾಗುವ ವಯನಾಡ್ ಲೋಕಸಭೆ ಕ್ಷೇತ್ರ ದಕ್ಷಿಣ ಭಾರತದಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ. 2019ರಲ್ಲಿ ಅಮೇಥಿಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸಂಸತ್ತಿಗೆ ಬಂದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಈ ಸ್ಥಾನಕ್ಕೆ ಸ್ಪರ್ಧಿಸಿ ಒಟ್ಟು 7,06,367 ಮತಗಳನ್ನು ಗಳಿಸಿ ಗೆಲ್ಲುವ ಮೂಲಕ ಸಂಸತ್ ಪ್ರವೇಶಿಸಿದ್ದರು. ಇದೀಗ ಅವರ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಇದೇ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.