ನಲಿಕೆ ಸಮಾಜದ ಅಧ್ಯಕ್ಷರಿಗೆ ಸಮನ್ಸ್ ಜಾರಿಯಾಗಿದೆ.
ಮಂಗಳೂರು, ಡಿಸೆಂಬರ್ 19: 2024ರ ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದ ಅನ್ಯ (ಮೊಗೇರ) ಸಮಾಜದ ಯುವಕನಿಂದ ಗುಳಿಗ ದೈವಕ್ಕೆ ನರ್ತನ ಸೇವೆ ವಿಚಾರ ಸದ್ಯ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದೆ. ಈ ಬಾರಿ ಕೂಡ ಅದೇ ಜಾಗದಲ್ಲಿ ಗುಳಿಗ ದೈವದ ಕೋಲ ನಡೆಯಲಿದೆ. ಆ ಕೋಲದಲ್ಲಿ ಮೊಗೇರ ಸಮುದಾಯದ ಯುವಕ ಮತ್ತೆ ದೈವ ನರ್ತನ ನಡೆಸಲಿದ್ದಾರೆ. ಹೀಗಾಗಿ ಮತ್ತೆ ನಲಿಕೆ ಸಮುದಾಯದಿಂದ ಗುಳಿಗ ಕೋಲ ತಡೆಯುವ ಸಾಧ್ಯತೆ ಇದೆ. ಈ ಕಾರಣಕ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಸೇವಾ ಟ್ರಸ್ಟ್ ಬೆಳ್ತಂಗಡಿ ಕೋರ್ಟ್ ಮೆಟ್ಟಿಲೇರಿದೆ.
ನಲಿಕೆ ಸಮಾಜದಿಂದ ಗುಳಿಗ ಕೋಲಕ್ಕೆ ತಡೆಯಾಗದಂತೆ ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದ್ದು, ಬೆಳ್ತಂಗಡಿಯ ನಲಿಕೆ ಸಮಾಜ ಸೇವಾ ಸಂಘದ ವಿರುದ್ದ ಕೋರ್ಟ್ನಲ್ಲಿ ಖಾಸಗಿ ದೂರು ನೀಡಲಾಗಿದೆ. ದೂರು ಸ್ವೀಕರಿಸಿದ ನ್ಯಾಯಾಲಯದಿಂದ ನಲಿಕೆ ಸಮಾಜ ಸೇವಾ ಸಂಘಕ್ಕೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಹಿಂದೆ ಸಿನಿಮಾಗಳಲ್ಲೂ ನಟರು ದೈವ ನರ್ತನ ಮಾಡುವುದನ್ನು ನಲಿಕೆ ಸಮಾಜ ವಿರೋಧಿಸಿದೆ.
ಇಂದು ಬೆಳ್ತಂಗಡಿ ಕೋರ್ಟ್ಗೆ ಹಾಜರಾಗುವಂತೆ ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಭಾಕರ್ ಎಂಬವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಸದ್ಯ ಕೋರ್ಟ್ ತೀರ್ಮಾನದ ಮೇಲೆ ದೈವರಾಧಕರ ಚಿತ್ತ ನೆಟ್ಟಿದೆ.
ಪ್ರಕರಣ ಹಿನ್ನಲೆ
ದೈವಾರಾಧನೆ ಕಟ್ಟುಪಾಡಿನ ಪ್ರಕಾರ ಮೂರು ಸಮಾಜದವರಿಂದ ಮಾತ್ರ ದೈವ ನರ್ತನ ಸೇವೆ ಮಾಡಬೇಕು. ಪರವ, ಪಂಬದ, ನಲಿಕೆ ಸಮಾಜದಿಂದ ಮಾತ್ರ ದೈವ ನರ್ತನ ಸೇವೆ ಅನ್ನೋ ಕಟ್ಟುಪಾಡಿದೆ. ಆದರೆ ಕಳೆದ ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅನ್ಯ (ಮೊಗೇರ) ಸಮಾಜದ ಯುವಕನಿಂದ ಗುಳಿಗ ದೈವಕ್ಕೆ ನರ್ತನ ಸೇವೆ ಮಾಡಲಾಗಿದೆ.
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಯುವಕ ಕೋಲ ಕಟ್ಟಿದ್ದ. ಈ ವೇಳೆ ದೈವ ನರ್ತಕ ನಲಿಕೆ ಸಮಾಜ ಕೋಲ ತಡೆದು ಆಕ್ರೋಶ ಹೊರ ಹಾಕಿತ್ತು. ಭಾರೀ ವಿವಾದದ ಬೆನ್ನಲ್ಲೇ ಗುಳಿಗ ದೈವ ಹಾಗೂ ನಲಿಕೆ ಸಮಾಜಕ್ಕೆ ಯುವಕ ಕ್ಷಮೆ ಯಾಚಿಸಿದ್ದ.