ರಾಯಚೂರು: ಅತ್ಯಾಚಾರಕ್ಕೆ ನಿರಾಕರಿಸಿದ ಸೊಸೆಯನ್ನೇ ಕೊಂದ ಪಾಪಿ ಮಾವ..!


ರಾಯಚೂರು: ಬಲವಂತವಾಗಿ ಅತ್ಯಾಚಾರ ಮಾಡಲು ಮುಂದಾದಾಗ ಒಪ್ಪದ ಕಾರಣಕ್ಕೆ ಸೊಸೆಯನ್ನು ಮಾವ ಕೊಲೆ ಮಾಡಿರುವ ಘಟನೆ ಜುಲಮಗೇರಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.


ಮೃತ ಮಹಿಳೆಯನ್ನು ದುಳ್ಳಮ್ಮ (26) ಎಂದು ಗುರುತಿಸಲಾಗಿದೆ. ಈಕೆ ಮಿರ್ಜಾಪುರ ಗ್ರಾಮಸ್ಥಳಾಗಿದ್ದು, ಜುಲಮಗೇರಾ ಗ್ರಾಮಕ್ಕೆ ವಿವಾಹವಾಗಿ ಬಂದಿದ್ದಳು.


ಈ ಹಿಂದೆ 2-3 ಬಾರಿ ರಾಮಲಿಂಗಯ್ಯ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಗ್ರಾಮದ ಹಿರಿಯರು, ಕುಟುಂಬದವರು ಬುದ್ಧಿ ಹೇಳಿದ್ದರು. ಆದಾಗ್ಯೂ ತನ್ನ ಚಾಳಿ ಬಿಡದ ದುರುಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸೊಸೆ ವಿರೋಧಿಸುತ್ತಿದ್ದಂತೆ ಆಕೆಯ ತಲೆಗೆ ಮಾರಣಾಂತಿಕವಾಗಿ ಹೊಡೆದು ಗ್ರಾಮದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದುಳ್ಳಮ್ಮ ಸ್ಥಳದಲ್ಲೇ ಸಾವನ್ನಪಿದ್ದಾರೆ.

ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.