DAKSHINA KANNADA CONGRESS: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ: ಜಿಲ್ಲಾ ಕಚೇರಿಯಲ್ಲೇ ಮಾರಾಮಾರಿ ನಡೆದರೂ ಕೆಪಿಸಿಸಿ ಮೌನ!!?


ದಕ್ಷಿಣಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದು ಸದ್ಯದ ವಾಸ್ತವ. ಈ ಭದ್ರಕೋಟೆಯನ್ನು ಭೇದಿಸುವುದು ಹೇಗೆ ಎಂದು ಯೋಚನೆ ಮಾಡಬೇಕಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಆಂತರಿಕ ಕಚ್ಚಾಟವೇ ಜೋರಾಗಿದ್ದು, ಜಿಲ್ಲಾ ಕಾಂಗ್ರೆಸ್ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾರಮಾರಿ ನಡೆದ ಬೆನ್ನಲ್ಲೇ ಇದೀಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.

ಮಂಗಳೂರು: ಹಿಂದುತ್ವದ ಭದ್ರಕೋಟೆ ಎಂದು ಕರೆಸಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆ ಬಿಜೆಪಿಯ ಶಕ್ತಿ ಕೇಂದ್ರವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಬಿಜೆಪಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್ ಎರಡು ಸ್ಥಾನ ಗೆದ್ದು ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಈ ಮಧ್ಯೆ, ಮುಂದಿನ ಚುನಾವಣೆಯೊಳಗಾಗಿ ಕಾಂಗ್ರೆಸ್​ ಪಕ್ಷಕ್ಕೆ ಶಕ್ತಿ ತುಂಬುವ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿಯೇ ಇತ್ತೀಚೆಗೆ ಮಾರಾಮಾರಿ ನಡೆಸುವ ಮೂಲಕ ಪಕ್ಷದ ನಾಯಕರು ಆಂತರಿಕ ಕಲಹವನ್ನು ಬೀದಿಗೆ ತಂದಿದ್ದಾರೆ. 




ಕಾಂಗ್ರೆಸ್‌ನ ಹಾಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮನಾಥ್ ರೈ, ಎಂಎಲ್​​ಸಿ ಮಂಜುನಾಥ್ ಭಂಡಾರಿ ಹಾಗೂ ಹಲವು ಪ್ರಮುಖ ನಾಯಕರ ಮುಂದೆಯೇ ಈ ಅಸಮಾಧಾನ ಸ್ಫೋಟಗೊಂಡಿತ್ತು. ಜಿಲ್ಲಾಧ್ಯಕ್ಷರ ವಿರುದ್ದವೇ ಕೈ ಮುಖಂಡ ತುಂಬೆ ಪ್ರಕಾಶ್ ಶೆಟ್ಟಿ ಅಸಮಧಾನ ತೋರಿದ್ದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಘಟನೆಯಾದ ಬಳಿಕ ಜಿಲ್ಲಾಧ್ಯಕ್ಷರ ಬದಲಾವಣೆಗೆ ಇದೀಗ ಒತ್ತಾಯ ಕೇಳಿ ಬಂದಿದ್ದು ಜಿಲ್ಲಾಧ್ಯಕ್ಷ ಗಾದಿಯ ರೇಸ್ ತೀವ್ರಗೊಂಡಿದೆ.



ಪಕ್ಷದ ಜಿಲ್ಲಾ ಕಚೇರಿಯಲ್ಲೇ ಮಾರಮಾರಿ ನಡೆದರೂ ಕೆಪಿಸಿಸಿ ಮಾತ್ರ ಮೌನವಾಗಿದೆ. ಹಾಲಿ ಅಧ್ಯಕ್ಷರ ಅವಧಿ ಮುಗಿದು ರಾಜೀನಾಮೆ ನೀಡಿ ಎರಡು ವರ್ಷಗಳೇ ಕಳೆದರೂ ಕೆಪಿಸಿಸಿ ಮಾತ್ರ ಇನ್ನೂ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆಯೂ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಇದಕ್ಕೆ ಜಿಲ್ಲೆಯಲ್ಲಿರುವ ಪ್ರಮುಖ ನಾಯಕರು ತಮ್ಮ ತಮ್ಮ ಆಪ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಬೇಕೆಂದು ಪಟ್ಟು ಹಿಡಿದು ಕೂತಿರುವುದು ಕಾರಣ ಎಂದು ಹೇಳಲಾಗುತ್ತಿದೆ. 





ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷರು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಮೇಲೆ ಅಷ್ಟೊಂದು ಆಸಕ್ತಿ ವಹಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಜಿಲ್ಲಾಧ್ಯಕ್ಷ ಕಚೇರಿಯಲ್ಲಿ ಮಾರಮಾರಿ ನಡೆದ ಬಳಿಕ ಮತ್ತೆ ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ ಕೇಳಿ ಬಂದಿದೆ.



ಜಿಲ್ಲಾಧ್ಯಕ್ಷರ ರೇಸ್​​ನಲ್ಲಿ ಯಾರೆಲ್ಲ?

ಈ ನಡುವೆ ಮಾಜಿ ಸಚಿವ ರಮನಾಥ್ ರೈ, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮರಾಜ್ ರಾಮಯ್ಯ, ಯುವ ಮುಖಂಡ ಮಿಥುನ್ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹೆಸರು ಜಿಲ್ಲಾಧ್ಯಕ್ಷ ರೇಸ್‌ನಲ್ಲಿದೆ. ಆದ್ರೆ ಈ ವಿಚಾರದಲ್ಲಿ ಮಾಜಿ ಸಚಿವ ರಮನಾಥ್ ರೈ ಪ್ರತಿಕ್ರಿಯಿಸಿದ್ದು ನಾನು ಜಿಲ್ಲಾಧ್ಯಕ್ಷ ಹುದ್ದೆಗೆ ಯಾವುದೇ ಲಾಭಿ ನಡೆಸಿಲ್ಲ ಎಂದು ಹೇಳಿದ್ದಾರೆ.






ಸದ್ಯ ಜಿಲ್ಲೆಯಲ್ಲಿ ಪರ್ಯಾಯ ನಾಯಕತ್ವಕ್ಕಾಗಿ ಕೈ ಕಾರ್ಯಕರ್ತರು ಹಪಹಪಿಸುತ್ತಿದ್ದಾರೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದರೆ ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡುತ್ತೆ ಎಂಬ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ, ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಸದ್ಯ ಉಂಟಾಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ.