ಕಡಬ: ಮಸೀದಿಯಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗುವುದು ಅಪರಾಧವೇ: ಸುಪ್ರೀಂ ಕೋರ್ಟ್ ಪ್ರಶ್ನೆ - JAI SRI RAM SLOGAN IN MOSQUE


ಮಸೀದಿಯ ಆವರಣದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಅಪರಾಧ ಅಲ್ಲ ಎಂಬ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿದೆ.

ನವದೆಹಲಿ: ಮಸೀದಿಯೊಳಗೆ 'ಜೈ ಶ್ರೀರಾಮ್​' ಎಂದು ಕೂಗುವುದು ಒಂದು ಕೋಮಿನ ಧರ್ಮದ ಅವಹೇಳನ ಮತ್ತು ಹೇಗೆ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ಅಲ್ಲದೇ, ಈ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಗೆ ನೀಡಿದೆ.

ಕರ್ನಾಟಕದ ಮಸೀದಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಅಪರಾಧ ಅಲ್ಲ ಎಂದು ಹೈಕೋರ್ಟ್​ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯು ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠದ ಮುಂದೆ ಬಂದಿತು. ಈ ವೇಳೆ ಪೀಠವು, 'ಘೋಷಣೆ ಕೂಗುವುದು ಅಪರಾಧ ಹೇಗಾಗುತ್ತದೆ' ಎಂದು ಪ್ರಶ್ನಿಸಿದರು.

"ಇದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧ ಎಂದು ಹಿರಿಯ ವಕೀಲ ದೇವದತ್​ ಕಾಮತ್ ಅವರು ಪ್ರತಿಪಾದಿಸಿದರು. ಇಂತಹ ಕೃತ್ಯಗಳಿಗೆ ಅನುಮತಿ ನೀಡಿದರೆ, ಸಮಾಜದಲ್ಲಿ ಅಶಾಂತಿ ಮೂಡಲಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ 20 ದಿನಗಳಲ್ಲಿಯೇ ಹೈಕೋರ್ಟ್ ತನಿಖೆಯನ್ನು ರದ್ದು ಮಾಡಿದೆ" ಎಂದು ವಾದಿಸಿದರು.

ಈ ವೇಳೆ ಪೀಠವು, ಆರೋಪಿಗಳು ಧಾರ್ಮಿಕ ಘೋಷಣೆಯನ್ನು ಕೂಗಿದ್ದು ಅಪರಾಧವಲ್ಲ. ಇದು ಶಿಕ್ಷಿತ ಪರಿಧಿಗೆ ಬರುವುದಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಪೀಠವು ಗಮನಿಸಿತು. "ಘೋಷಣೆ ಕೂಗಿದವರ ವಿರುದ್ಧ ಯಾರು ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಹೇಗೆ ಗುರುತಿಸಲಾಗಿದೆ" ಎಂದು ಪೀಠವು ಈ ವೇಳೆ ಪ್ರಶ್ನೆ ಮಾಡಿತು.


"ಆರೋಪಿಗಳು ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ" ಎಂದು ಕಾಮತ್​ ಅವರು ಪೀಠಕ್ಕೆ ತಿಳಿಸಿದರು. "ಮಸೀದಿಯಲ್ಲಿ ವ್ಯಕ್ತಿಗಳು ಕಂಡುಬಂದರೆ, ಅವರೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದರ್ಥವೇ" ಎಂದು ಪೀಠವು ಮರು ಪ್ರಶ್ನೆ ಮಾಡಿತು. ಬಳಿಕ ದೂರುದಾರ ಹೈದರ್​​ ಅಲಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು 2025 ರ ಜನವರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.

ಏನಿದು ಪ್ರಕರಣ? 2024 ಸೆಪ್ಟೆಂಬರ್​ 13 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಸೀದಿಯ ಆವರಣಕ್ಕೆ ಪುತ್ತೂರಿನ ಕೀರ್ತನ್​, ಮಂಗಳೂರಿನ ಸಚಿನ್​ ನುಗ್ಗಿ ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದಾರೆ ಎಂದು ಮಸೀದಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದರು. ತಮ್ಮ ವಿರುದ್ಧ ದಾಖಲಾದ ಕೇಸ್​ ಅನ್ನು ರದ್ದು ಮಾಡಬೇಕು ಎಂದು ಕೋರಿ ಇಬ್ಬರೂ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಜೈ ಶ್ರೀರಾಮ್​ ಎಂದು ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ. ಧಾರ್ಮಿಕ ಭಾವನೆಗಳಿಗೆ ಹೇಗೆ ಧಕ್ಕೆ ತರುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಪ್ರಕರಣದಲ್ಲಿ ಯಾವುದೇ ಅಪರಾಧವೂ ಕಂಡು ಬರುತ್ತಿಲ್ಲ. ಆರೋಪಿಗಳ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಹೇಳಿ ಪ್ರಕರಣವನ್ನು ರದ್ದು ಮಾಡಿತ್ತು.