ಬೆಳಂದೂರು: ಪ್ರತಿ ಗ್ರಾಮೀಣರೂ, ಬಡವರು, ನಿರ್ಗತಿಕರಿಗೆ ಉತ್ತಮ ಆರೋಗ್ಯ ಸೇವೆಗಳು ಸಿಗಬೇಕೆಂಬ ಉದ್ದೇಶ ನಮ್ಮ ಸರಕಾರದ್ದಾಗಿದೆ. ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ನಮ್ಮ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು.
ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಕುಡಿತ ಒಂದು ಚಟವಾಗಿದೆ. ಇದನ್ನು ಬಿಡಬೇಕು. ಇದರಿಂದ ಆರೋಗ್ಯ ಹಾಳಾಗುತ್ತದೆ. ಇದನ್ನು ಬಿಟ್ಟರೆ ನಾವು ಕೂಡ ಮದ್ಯ ಮಾರಾಟವನ್ನು ನಿಲ್ಲಿಸುತ್ತೇವೆ. ಈ ಬಾರಿ ಅಬಕಾರಿ ಇಲಾಖೆಯಿಂದ ಸರಕಾರಕ್ಕೆ 38,525 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಇದು ಬರುತ್ತದೆ ಎಂಬ ನಂಬಿಕೆಯೂ ಇದೆ. ಏಕೆಂದರೆ ಕುಡಿಯುವರ ಸಂಖ್ಯೆ ದಿನೇದಿನೆ ಹೆಚ್ಚುತ್ತದೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಕುಡಿಯುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.
ಜನವರಿ ಅಥವಾ ಫೆಬ್ರವರಿಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ
2025ರ ಜನವರಿ ಅಥವಾ ಫೆಬ್ರವರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಆಗಲೂ ಸಹ ನೀವು ಈಗ ನೀಡುತ್ತಿರುವ ಬೆಂಬಲವನ್ನು ನಮಗೆ ನೀಡಿ. ನಾವು ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಗೆದ್ದಿದ್ದೇವೆ, ಇದನ್ನು ಮತ್ತಷ್ಟು ಬಲಗೊಳಿಸುವ ಕೆಲಸವನ್ನು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.