ಮುನಿರತ್ನ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ; ಚರ್ಚೆ ಬಳಿಕ ಕ್ರಮ: ಸ್ಪೀಕರ್ ಯುಟಿ ಖಾದರ್

ಬೆಂಗಳೂರು: 'ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ, ಬಿಜೆಪಿಯ ಮುನಿರತ್ನ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಕುರಿತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ' ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.


ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಈ ಕುರಿತು ಪ್ರಾಸಿಕ್ಯೂಷನ್‌ಗೆ ವಿಧಾನಸಭಾಧ್ಯಕ್ಷರಿಂದ ಅನುಮತಿ ಕೋರಿರುವ ಕುರಿತ ಪ್ರಶ್ನೆಗೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಶನಿವಾರ ಉತ್ತರಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ‌ಸಿ.ಟಿ.ರವಿ ಅವಾಚ್ಯ ಪದ ಬಳಸಿದ್ದಾರೆ ಎನ್ನಲಾದ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಇಂತಹ ಘಟನೆ ನಡೆಯಬಾರದಿತ್ತು. ಈ ಬಗ್ಗೆ ವಿಧಾನ ಪರಿಷತ್ತಿನ ಸಭಾಪತಿಯವರೇ ಕ್ರಮ ಕೈಗೊಳ್ಳಲಿದ್ದಾರೆ' ಎಂದರು.

'ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈಚೆಗೆ ಎಂಟು ದಿನ ನಡೆದ ವಿಧಾನಸಭಾ ಅಧಿವೇಶನದಲ್ಲಿ 63 ಗಂಟೆ 57 ನಿಮಿಷ ಕಲಾಪ ನಡೆಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು 13 ಗಂಟೆ 11 ನಿಮಿಷ ಚರ್ಚೆ ನಡೆಸಲಾಗಿದ್ದು, 49 ಸದಸ್ಯರು ಇದರಲ್ಲಿ ಭಾಗವಹಿಸಿದ್ದಾರೆ. 16 ಮಸೂದೆಗಳನ್ನು ಅಂಗೀಕರಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.