ಮಂಗಳೂರು: ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ - ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ..!!!

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತಗತಿ ವಿಶೇಷ ನ್ಯಾಯಾಲಯ -2 (ಪೊಕ್ಸೊ) 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 55 ಸಾವಿರ ದಂಡ ವಿಧಿಸಿದೆ. 'ಧರ್ಮಸ್ಥಳ ಗ್ರಾಮದ ಕೆ.ಎಸ್.ಕೇಶವ ಪೂಜಾರಿ ಶಿಕ್ಷೆಗೊಳಗಾದವ.



15 ವರ್ಷದ ಬಾಲಕಿ ಜೊತೆ ಅನ್ಯೋನ್ಯವಾಗಿದ್ದ ಕೇಶವ ಪೂಜಾರಿ ಆಕೆಯ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಮನೆಯಲ್ಲಿ ಆಕೆ ಒಬ್ಬಳೇ ಇದ್ದ ಸಂದರ್ಭ ನೋಡಿಕೊಂಡು, ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. 'ಈ ವಿಚಾರವನ್ನು ತಂದೆ ತಾಯಿಗೆ ಹೇಳಿದರೆ ನಿನಗೂ ಶಿಕ್ಷೆಯಾಗುತ್ತದೆ ಎಂದು ಹೆದರಿಸಿ ಪದೇ ಪದೇ ದೌರ್ಜನ್ಯವೆಸಗಿದ್ದ. 8ನೇ ತರಗತಿಯಲ್ಲಿದ್ದಾಗಿನಿಂದಲೂ ಆಕೆ ಈ ರೀತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು.'



'2023 ನವೆಂಬರ್‌ನಲ್ಲಿ ಬಾಲಕಿಯ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಬಾಲಕಿಯ ತಾಯಿ ಈ ವಿಚಾರವನ್ನು ಕೇಶವನ ಗಮನಕ್ಕೆ ತಂದಿದ್ದರು. ಸಂತ್ರಸ್ತ ಬಾಲಕಿಯನ್ನು ತಾಯಿ ಮತ್ತು ಕೇಶವ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷಿಸಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದರು. 'ನನ್ನ ಬದಲು ಬೇರೆಯವರ ಹೆಸರು ಹೇಳು. ಇಲ್ಲದಿದ್ದರೆ ನಮ್ಮಿಬ್ಬರಿಗೂ ಶಿಕ್ಷೆಯಾಗುತ್ತದೆ' ಎಂದು ಮತ್ತೆ ಬಾಲಕಿಯನ್ನು ಆತ ಬೆದರಿಸಿದ್ದ. 




ಗರ್ಭವತಿಯಾಗಲು ಬೇರೊಬ್ಬ ವ್ಯಕ್ತಿ ಕಾರಣ ಎಂದು ಸಂತ್ರಸ್ತ ಬಾಲಕಿ ಮೊದಲು ಹೇಳಿಕೆ ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಪ್ತ ಸಮಾಲೋಚನೆ ಮಾಡಿ ಧೈರ್ಯ ತುಂಬಿ ಮತ್ತೆ ವಿಚಾರಣೆ ನಡೆಸಿದಾಗ ಬಾಲಕಿಯು ಕೇಶವ ಪೂಜಾರಿಯಿಂದಾಗಿಯೇ ಗರ್ಭ ಧರಿಸಿದ್ದಾಗಿ ತಿಳಿಸಿದ್ದಳು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.'



ಈ ನಡುವೆ ಸಂತ್ರಸ್ತ ಬಾಲಕಿಗೆ ಗರ್ಭಪಾತ ಮಾಡಿಸಲಾಗಿತ್ತು. ಆ ಭ್ರೂಣದ ಡಿಎನ್‌ಎ ಮಾದರಿಯ ಪರೀಕ್ಷೆಯಲ್ಲಿ ಕೇಶವ ಪೂಜಾರಿಯೇ ಆಕೆಯ ಜೈವಿಕ ತಂದೆ ಎಂದು ವರದಿ ಬಂದಿತ್ತು. ಧರ್ಮಸ್ಥಳ ಠಾಣೆಯ ಇನ್‌ಸ್ಪೆಕ್ಟರ್‌ ನಾಗೇಶ್ ಕೆ. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.



'ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತಗತಿ ವಿಶೇಷ ನ್ಯಾಯಾಲಯ -2 (ಪೊಕ್ಸೊ) ನ್ಯಾಯಾಧೀಶರಾದ ಮಾನು ಕೆ. ಎಸ್. ಅವರು ಕೇಶವ ಪೂಜಾರಿಗೆ ಅತ್ಯಾಚಾರದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376(2)(ಎನ್), 376(3) ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್‌ 6 ರ ಪ್ರಕಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದ್ದಾರೆ. 




ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಐಪಿಸಿ ಸೆಕ್ಷನ್‌ 506ರ ಪ್ರಕಾರ 3 ತಿಂಗಳ ಸಾದಾ ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶ ಮಾಡಿದ್ದಾರೆ. ₹ 55ಸಾವಿರ ದಂಡದ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. 




ಸಂತ್ರಸ್ತರ ಪರಿಹಾರ ಯೋಜನೆಯಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ ₹ 6.45 ಲಕ್ಷ ಪರಿಹಾರವನ್ನು ನೀಡಬೇಕು ನಿರ್ದೇಶನ ನೀಡಿದ್ದಾರೆ' ಎಂದು ಈ ಪ್ರಕರಣದ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದ ಸರ್ಕಾರಿ ವಕೀಲ ಕೆ.ಬದರಿನಾಥ ನಾಯರಿ ತಿಳಿಸಿದ್ದಾರೆ.