ಮಂಗಳೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ ಬಾರಿಗೆ ಕೊಡಮಾಡಿದ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಜನವರಿ 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ನಡೆಯಿತು.
ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಭಾಜನರಾದ ಸುಳ್ಯದ ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನಟಿ ಉಮಾಶ್ರೀಯವರು ಪ್ರಶಸ್ತಿ ಪ್ರದಾನ ಮಾಡಿದರು. ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಹಾಗೂ ವಿಜ್ಞಾನ, ಸಾಹಿತ್ಯ, ಶೈಕ್ಷಣಿಕ, ರಾಜಕೀಯ ಕ್ಷೇತ್ರದ ಗಣ್ಯಾತಿಗಣ್ಯರು ಭಾಗವಹಿಸಿದ ಸಮ್ಮೇಳನದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್, ವೈಜ್ಞಾನಿಕ ಪರಿಷತ್ತ್ ನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್, ಪರಿಷತ್ತ್ ನ ದ. ಕ ಜಿಲ್ಲಾಧ್ಯಕ್ಷ ಕಿದು ಗೋಪಾಲಕೃಷ್ಣ ಹಾಗೂ ಎಲ್ಲಾ ಜಿಲ್ಲೆಗಳ ಅಧ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು.