Bengaluru: ಬೆಂಗಳೂರು ಬೆಚ್ಚಿ ಬೀಳಿಸಿದ್ದ ಕಾರ್ಪೋರೇಟರ್‌ ರೇಖಾ ಕೊಲೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ


ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೆಟರ್‌ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ 7 ಮಂದಿ ಅಪ ರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 72ನೇ ಸಿಸಿಎಚ್‌ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿ ಆದೇಶಿಸಿದೆ.


ಕಾಟನ್‌ಪೇಟೆಯ ಪೀಟರ್‌ (46), ಸೂರ್ಯ ಅಲಿಯಾಸ್‌ ಸೂರಜ್‌ (20), ಸ್ಟೀಫನ್‌ (21), ಪುರುಷೋತ್ತಮ್‌ (22), ಅಜಯ್‌ (21), ಅರುಣ್‌ಕುಮಾರ್‌ (36) ಮತ್ತು ಸೆಲ್ವರಾಜ್‌ ಅಲಿಯಾಸ್‌ ಬುದಾನ್‌ (36)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.




ಪ್ರಕರಣದ ಮತ್ತೂಬ್ಬ ಆರೋಪಿ, ಕೊಲೆಯಾದ ರೇಖಾ ಕದಿರೇಶ್‌ ಅತ್ತಿಗೆ ಮಾಲಾ ಮೃತಪಟ್ಟಿದ್ದಾಳೆ.



ಆರೋಪಿಗಳು 2021ರ ಜೂನ್‌ನಲ್ಲಿ ಕಚೇರಿ ಬಳಿಯೇ ರೇಖಾ ಕದಿರೇಶ್‌ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಬಳಿಕ ಪಶ್ಚಿಮ ವಿಭಾಗದ ಅಂದಿನ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ನೇತೃತ್ವದಲ್ಲಿ ಕಾಟನ್‌ಪೇಟೆಯ ಠಾಣಾಧಿಕಾರಿ ಚಿದಾನಂದಮೂರ್ತಿ ಹಾಗೂ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿತ್ತು.




 ಬಳಿಕ ಆರೋಪಿಗಳು ಸುಮಾರು 800ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುದೀರ್ಘ‌ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ 7 ಮಂದಿಯೂ ಅಪರಾಧಿಗಳು ಎಂದು ಘೋಷಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.



ಸರ್ಕಾರಿ ಅಭಿಯೋಜಕರಾಗಿ ಸತ್ಯವತಿ ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಾಲಚಂದ್ರ ಎನ್‌. ಭಟ್‌ ಅವರು ಮಂಗಳವಾರ ಶಿಕ್ಷೆ ಪ್ರಕಟಿಸಿದ್ದಾರೆ.



ಏನಿದು ಪ್ರಕರಣ?: 2021ರ ಜೂನ್‌ 24ರಂದು ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಕದಿರೇಶ್‌, ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಬಳಿ ಊಟ ಹಂಚುತ್ತಿದ್ದರು. ಹಣಕಾಸಿನ ವಿಚಾರಕ್ಕೆ ರೇಖಾ ಅವರ ಅತ್ತಿಗೆ ಮಾಲಾ, ಆಕೆಯ ಪುತ್ರ ಸೆಲ್ವರಾಜ್‌ ಸುಫಾರಿ ನೀಡಿದ್ದ ಹಿನ್ನೆಲೆಯಲ್ಲಿ ಇತರ ಅಪರಾಧಿಗಳು ರೇಖಾರನ್ನು ಹತ್ಯೆಗೈದಿದ್ದರು. 2018ರಲ್ಲಿ ರೇಖಾ ಪತಿ ಕದಿರೇಶ್‌ ಕೊಲೆ ಸಹ ನಡೆದಿತ್ತು.

ನಂತರ ಪ್ರತ್ಯೇಕವಾಗಿ ವಾಸವಿದ್ದ ರೇಖಾ, ಪತಿ ಕುಟುಂಬವನ್ನು ರಾಜಕೀಯವಾಗಿ ಕಡೆಗಣಿಸಿದ್ದರು. ಇದು ಕದಿರೇಶ್‌ ಅಕ್ಕ ಮಾಲಾ ಹಾಗೂ ಸಂಬಂಧಿಕರನ್ನು ಕೆರಳಿಸಿತ್ತು. ಪೀಟರ್‌, ಕದಿರೇಶ್‌ ಜತೆ ಓಡಾಡಿಕೊಂಡಿದ್ದ. ಕದಿರೇಶ್‌ ಕೊಲೆಯಾದ ನಂತರ, ರೇಖಾ ಅವರ ಅಂಗರಕ್ಷಕನಾಗಿ ಸುತ್ತಾಡುತ್ತಿದ್ದ. ಆತನನ್ನು ದೂರವಿಡಲು ರೇಖಾ ಯತ್ನಿಸುತ್ತಿದ್ದರು. ಅದರಿಂದ ಪೀಟರ್‌ ಸಿಟ್ಟಾಗಿದ್ದ. ಪೀಟರ್‌ನನ್ನು ಸಂಪರ್ಕಿಸಿದ್ದ ಮಾಲಾ ಹಾಗೂ ಅವರ ಮಗ ಅರುಣ್‌, ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು.