Bigg Boss Kannada 11: ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ ಹಳ್ಳಿ ಹೈದ ಹನುಮಂತ ಲಮಾಣಿ, ಮುಗಿಲು ಮುಟ್ಟಿದ ಸಂಭ್ರಮ

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಫಲಿತಾಂಶ ಹೊರಬಿದ್ದಿದೆ. ಅಂತಿಮವಾಗಿ ಉಳಿದ ತ್ರಿವಿಕ್ರಮ್‌ ಮತ್ತು ಹನುಮಂತ ಇವರಿಬ್ಬರ ಪೈಕಿ ಹಳ್ಳಿ ಹಕ್ಕಿ ಹನುಮಂತು ಅವರ ಕೈ ಎತ್ತುವ ಮೂಲಕ ಕಿಚ್ಚ ಸುದೀಪ್‌ ವಿಜೇತರನ್ನು ಘೋಷಣೆ ಮಾಡಿದ್ದಾರೆ.


ಈ ಮೂಲಕ ಹನುಮಂತ ಲಮಾಣಿಗೆ ಬಿಗ್‌ ಬಾಸ್‌ ಪಟ್ಟ ಒಲಿದಿದೆ. ಈ ಶೋ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕ ಮೊದಲ ಬಿಗ್‌ ಬಾಸ್‌ ಟ್ರೋಫಿ ಇದಾಗಿದೆ.

ಬಿಗ್‌ ಬಾಸ್‌ ಶುರುವಾದ ಮೂರೇ ವಾರಕ್ಕೆ ಜಗದೀಶ್‌ ಮತ್ತು ರಂಜಿತ್‌ ನೇರವಾಗಿ ಎಲಿಮಿನೇಟ್‌ ಆದರು. ಆಗ ವೈಲ್ಡ್‌ ಕಾರ್ಡ್ ಎಂಟ್ರಿಕೊಟ್ಟವರು ಹನುಮಂತ ಲಮಾಣಿ. ಘಟಾನುಘಟಿಗಳ ನಡುವೆ ತಮ್ಮ ಹಾಡುಗಳ ಮೂಲಕವೇ ರಂಜಿಸಿದ ಹನಮಂತ ಲಮಾಣಿ, ಯಾರ ಜತೆಗೆ ದ್ವೇಷ ಕಟ್ಟಿಕೊಳ್ಳದೆ, ಸ್ನೇಹ ಬಯಸಿದ ಜೀವಗಳಿಗೆ ಅಂಗಲಾಚಿ ಸ್ನೇಹ ನೀಡಿದ್ದಾರೆ. ಅದರ ಪ್ರತಿಫಲವೇ ಮೊದಲ ಫಿನಾಲೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಈಗ ಎರಡು ರೆಕ್ಕೆಗಳುಳ್ಳ ಟ್ರೋಫಿ ಗೆದ್ದು ಬೀಗಿದ್ದಾರೆ.

ರನ್ನರ್‌ ಅಪ್‌ ಸ್ಥಾನಕ್ಕೆ ಖುಷಿ ಪಟ್ಟ ತ್ರಿವಿಕ್ರಮ್‌

ಬಿಗ್‌ ಬಾಸ್‌ ಮನೆ ಒಳಗೆ ಪ್ರವೇಶಿಸಿದ ಸುದೀಪ್‌, ಹನುಮಂತ, ತ್ರಿವಿಕ್ರಂ ಮತ್ತು ರಜತ್‌ ಅವರನ್ನು ವೇದಿಕೆಯತ್ತ ಕರೆತಂದಿದ್ದಾರೆ. ಈ ಮೂವರಲ್ಲಿ ಮೊದಲಿಗೆ ರಜತ್‌ ಎಲಿಮಿನೇಟ್‌ ಆಗುವ ಮೂಲಕ ಎರಡನೇ ರನ್ನರ್‌ ಆಪ್‌ ಸ್ಥಾನ ಪಡೆದರೆ, ಇನ್ನುಳಿದ ಹನುಮಂತು ಮತ್ತು ತ್ರಿವಿಕ್ರಂ ಪೈಕಿ ಹನುಮಂತು ಅವರ ಕೈಯನ್ನು ಎತ್ತುವ ಮೂಲಕ ವಿಜೇತರನ್ನು ಘೋಷಣೆ ಮಾಡಿದ್ದಾರೆ. ಹನುಮಂತು ವಿನ್ನರ್‌ ಆದರೆ, ತ್ರಿವಿಕ್ರಂ ಮೊದಲ ರನ್ನರ್‌ ಆಗಿದ್ದಾರೆ.

50 ಲಕ್ಷ ಕ್ಯಾಶ್‌ ಪ್ರೈಸ್‌ ಜತೆಗೆ ಟ್ರೋಫಿ

ಇನ್ನು ಬಿಗ್‌ ಬಾಸ್‌ ಕನ್ನಡ 11ರಲ್ಲಿ 5,23,,89,318 ವೋಟ್ ಪಡೆ‌ದ ಹನುಮಂತುಗೆ 50 ಲಕ್ಷ ಕ್ಯಾಶ್‌ ಪ್ರೈಸ್‌ ಬಹುಮಾನವಾಗಿ ಸಿಕ್ಕಿದೆ. ಜತೆಗೆ ಎರಡು ರೆಕ್ಕೆಗಳುಳ್ಳ ಟ್ರೋಫಿಯೂ ಕೈ ತಲುಪಿದೆ. ಇದರ ಜತೆಗೆ ಇನ್ನೂ ಹತ್ತು ಹಲವು ಕ್ಯಾಶ್‌ ಪ್ರೈಸ್‌ಗಳು ಸಿಕ್ಕಿವೆ.

ಈ ಸೀಸನ್‌ನ ಸ್ಪರ್ಧಿಗಳು ಇವರೇ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಒಟ್ಟು 20 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಆ ಪೈಕಿ ಹನುಮಂತ ಲಮಾಣಿ ವಿನ್ನರ್‌ ಆದರೆ, ತ್ರಿವಿಕ್ರಮ್‌ ಮೊದಲ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ. ಅದಾದ ಬಳಿಕ ರಜತ್‌, ಮೋಕ್ಷಿತಾ, ಉಗ್ರಂ ಮಂಜು, ಭವ್ಯ, ಧನರಾಜ್, ಗೌತಮಿ, ಚೈತ್ರ, ಐಶ್ವರ್ಯ, ಸುರೇಶ್, ಶಿಶಿರ್, ಶೋಭಾ, ಧರ್ಮ, ಅನುಷಾ, ಮಾನಸ, ಹಂಸ, ರಂಜಿತ್, ಜಗದೀಶ್, ಯಮುನಾ ಭಾಗವಹಿಸಿದ್ದಾರೆ.

ಫಿನಾಲೆ ಶೋನಲ್ಲಿ ಕಣ್ಣೀರಿಟ್ಟ ಸುದೀಪ್

ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆ ವೇದಿಕೆ ಮೇಲೆ ಕಿಚ್ಚ ಸುದೀಪ್‌ ಕಣ್ಣೀರಾಗಿದ್ದಾರೆ. ಕಲರ್ಸ್‌ ಕನ್ನಡದ ವತಿಯಿಂದ ವಿಶೇಷ ಉಡುಗೊರೆಯನ್ನು ಪಡೆದು, ಭಾವುಕರಾಗಿದ್ದಾರೆ. ಬಿಗ್‌ ಬಾಸ್‌ ವೇದಿಕೆ ಮೇಲೆ ಬಂದ ನಿರ್ದೇಶಕ, ವಿಕಟ ಕವಿ ಯೋಗರಾಜ್‌ ಭಟ್‌, ಸುದೀಪ್‌ ಅವರ ಈ ವರೆಗಿನ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಮೊದಲ ಸೀಸನ್‌ ಶುರುವಾಗಿದ್ದು ಹೇಗೆ? ಅಂದಿನ ಫಸ್ಟ್‌ ಏಪಿಸೋಡ್‌ ಆರಂಭಕ್ಕೂ ಮುನ್ನ ಹೇಗಿತ್ತು ಎಂಬುದನ್ನು ಮತ್ತೆ ಮೆಲುಕು ಹಾಕಿದ್ದಾರೆ.

ಅದಾದ ಮೇಲೆ ನಿಮಗೊಂದು ವಿಶೇಷ ಉಡುಗೊರೆ ಇದೆ. ಈ ಕೂಡಲೇ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳಿ ಎಂದು ಸುದೀಪ್‌ ಅವರಿಗೆ ಹೇಳಿದ್ದಾರೆ. ನಿಮಗೊಂದು ಸರ್ಪ್ರೈಸ್‌ ಕೊಡಲು ಇಡೀ ಕಲರ್ಸ್‌ ಕನ್ನಡ ತಂಡ ಒಂದು ಸಣ್ಣ ಉಡುಗೊರೆ ತಂದಿದೆ ಎಂದಿದ್ದಾರೆ. ಸುದೀಪ್‌ ವೇದಿಕೆ ಬಿಟ್ಟು ಕೆಳಗಿಳಿಯುತ್ತಿದ್ದಂತೆ, ಅಮ್ಮ ಅಮ್ಮ.. ಹಾಡಿನ ಮೂಲಕ ಅಮ್ಮ ಸರೋಜ ಸಂಜೀವ್‌ ಅವರ ಪ್ರತಿರೂಪವನ್ನು ವೇದಿಕೆ ಮೇಲೆ ತಂದಿದೆ ಕಲರ್ಸ್‌ ಕನ್ನಡ.