ಹಿರಿಯ ಚಿಂತಕ, ಲೇಖಕ ಪ್ರೊ.ಮುಝಫ್ಫರ್ ಅಸ್ಸಾದಿ ನಿಧನ


ಮಂಗಳೂರು: ಹಿರಿಯ ವಿದ್ವಾಂಸ, ಚಿಂತಕ, ಲೇಖಕ, ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದ ಪ್ರೊ. ಮುಝಫ್ಫರ್ ಹುಸೇನ್ ಅಸ್ಸಾದಿ (63) ಅವರು ಶುಕ್ರವಾರ (ಜ.3) ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಅಸ್ಸಾದಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ಹೇಳಿವೆ.

ಇಂದು (ಜ.4) ಮೈಸೂರಿನ ಸರಸ್ವತಿಪುರಂ ಫೈರ್ ಬ್ರಿಗೇಡ್‌ ಬಳಿ ಇರುವ ನ್ಯೂ ಮುಸ್ಲಿಂ ಹಾಸ್ಟೆಲ್‌ನಲ್ಲಿ ಅಸ್ಸಾದಿ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

ಉಡುಪಿ ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಜನಿಸಿದ ಪ್ರೊ.ಅಸ್ಸಾದಿ ಅವರು ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಚಿಂತಕರಾಗಿದ್ದರು, ವಿಶಿಷ್ಟ ರಾಜಕೀಯ ಒಳನೋಟಗಳನ್ನು ನೀಡುತ್ತಿದ್ದ ಬರಹಗಾರರಾಗಿದ್ದರು.

ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ‌ 2022ರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಆಗಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ, ಎಂ.ಫಿಲ್ ಪದವಿ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಯಲದಲ್ಲಿ ಪಿಹೆಚ್‌ಡಿ ಪದವಿ, ಅಮೆರಿಕದ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್- ಡಾಕ್ಟರೇಟ್ ಪದವಿ, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದಿಂದ ಜೆಆರ್‌ಎಫ್‌ ಫೆಲೋಶಿಪ್, ರಾಕ್‌ ಫೆಲ್ಲರ್ ಫೆಲೋಶಿಪ್ ಮೊದಲಾದ ಪ್ರತಿಷ್ಠಿತ ಪದವಿ ಮತ್ತು ಪುರಸ್ಕಾರಗಳನ್ನು ಪ್ರೊ. ಅಸ್ಸಾದಿಯವರು ಪಡೆದಿದ್ದರು.


ಪ್ರೊ. ಅಸ್ಸಾದಿಯವರು ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ 1991ರಿಂದ 1994ರವರೆಗೆ ರಾಜ್ಯಶಾಸ್ತ್ರ ಉಪನ್ಯಾಸಕ, 1994ರಿಂದ 2002ರವರೆಗೆ ಪ್ರವಚಕ, 2002ರಿಂದ-2023ರವರೆಗೆ ಪ್ರಾಧ್ಯಾಪಕ ಮೊದಲಾದ ಹುದ್ದೆಗಳನ್ನು ನಿರ್ವಹಿಸಿದ್ದರು.

ಸಂಶೋಧಕ, ಚಿಂತಕ ಹಾಗೂ ಬರಹಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದ ಪ್ರೊ.ಅಸ್ಸಾದಿಯವರು ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ದಿಶಾಸ್ತ್ರ ಮೊದಲಾದ ಕ್ಷೇತ್ರಗಳ ಬಗ್ಗೆ ವಿನೂತನ ಚಿಂತನೆಗಳು ಮತ್ತು ವಿದ್ವತ್‌ಪೂರ್ಣ ಬರಹಗಳಿಂದ ಒಳನೋಟ ನೀಡುತ್ತಿದ್ದರು.


ಪ್ರೊ. ಅಸ್ಸಾದಿಯವರು ಸುಮಾರು 500ಕ್ಕೂ ಹೆಚ್ಚು ಪ್ರಬಂಧಗಳನ್ನು ದೇಶ-ವಿದೇಶಗಳಲ್ಲಿ ಮಂಡಿಸಿದ್ದರು. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿಗಳು, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಸುಮಾರು 14 ಕೃತಿಗಳನ್ನು ರಚಿಸಿದ್ದಾರೆ. ಅವರ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಜಗತ್ತಿನ ಸುಮಾರು 15ಕ್ಕೂ ಹೆಚ್ಚು ಪ್ರತಿಷ್ಠಿತ ನಿಯತಕಾಲಿಕೆಗಳ ಸಂಪಾದಕೀಯ ಮಂಡಳಿಯ ಸಲಹೆಗಾರರಾಗಿ ಪ್ರೊ.ಅಸ್ಸಾದಿ ಕರ್ತವ್ಯ ನಿರ್ವಹಿಸಿದ್ದರು. ವಿವಿಧ ರಾಜ್ಯಗಳ ಸಾರ್ವಜನಿಕ ಸೇವಾ ಆಯೋಗಗಳಲ್ಲಿ ಪರೀಕ್ಷರಾಗಿ ಮತ್ತು ಸಂದರ್ಶಕರಾಗಿ ಸೇವೆ ಸಲ್ಲಿಸಿದ್ದರು.

ಪ್ರೊ. ಅಸ್ಸಾದಿಯವರು ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ ವರದಿ ನೀಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಪುಸ್ತಕ ಬಹುಮಾನ ನೀಡಿ ಪ್ರೊ,.ಅಸ್ಸಾದಿಯವರನ್ನು ಗೌರವಿಸಿತ್ತು.


ಗಣ್ಯರಿಂದ ಸಂತಾಪ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ: ನಮ್ಮೆಲ್ಲರಿಗೆ ಪ್ರೀತಿ ಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.

ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ.

ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್‌ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ.

ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ.

ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.



ಅಶೋಕ್ ಶೆಟ್ಟರ್ : 1980 ರ ದಶಕದ ಮಧ್ಯದ ಹೊತ್ತಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ತಮ್ಮ ಸಂಶೋಧನಾ ವ್ಯಾಸಂಗಕ್ಕೆ JNU ನ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ ಗೆ ಪ್ರವೇಶ ಪಡೆದು ಬಂದ ಮುಝಾಪ್ಫರ್ ನಮ್ಮ ಬ್ರಹ್ಮಪುತ್ರಾ ಹಾಸ್ಟೆಲ್ ನಲ್ಲೇ ಇದ್ದರು. ಅದಾಗಲೇ ಮೂರ್ನಾಲ್ಕು ವರ್ಷ ಅಲ್ಲಿ ಕಳೆದಿದ್ದ ನನಗೆ ಆತ್ಮೀಯರೂ ಆದರು. ಸಾಯಂಕಾಲಗಳಲ್ಲಿ ನಾವಿಬ್ಬರೂ ವಾಕಿಂಗ್ ಗೆ ಹೋಗುತ್ತಿದ್ದೆವು. ದಕ್ಷಿಣ ಕನ್ನಡದ ರಾಜಕೀಯ ವಿದ್ಯಮಾನಗಳನ್ನವರು ವಿವರಿಸುತ್ತಿದ್ದರು. ನಾನು 1986 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಯುಕ್ತನಾದಾಗ ನನ್ನ ಸಹ ಕನ್ನಡಿಗ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆಲ್ಲ ಪಾರ್ಟಿ ಕೊಟ್ಟಾಗ ಉತ್ಸಾಹದಿಂದ ಅದರ ತಯಾರಿಯಲ್ಲಿ ನನ್ನ ಜೊತೆಗಿದ್ದರು. ಒಮ್ಮೆ ಧಾರವಾಡಕ್ಕೆ ಯಾವುದೋ ಕೆಲಸಕ್ಕೆ ಬಂದಾಗ ಯೂನಿವರ್ಸಿಟಿ ಗೆಸ್ಟ್ ಹೌಸ್ ಪಕ್ಕದಲ್ಲೇ ಇದ್ದ ನಮ್ಮ ಮನೆಗೆ ಸಕುಟುಂಬ ಬಂದಿದ್ದರು. ಜೆ.ಎನ್.ಯುನಲ್ಲಿದ್ದಾಗ ನಾನು ಪ್ರೀತಿಯಿಂದ ಅವರನ್ನು ಪುಟ್ಟಾ ಎಂದು ಕರೆಯುತ್ತಿದ್ದಾಗ ಹಾಗೆ ಕರೀಬೇಡ, ನಾನು ಇಷ್ಟು ವರ್ಷ ಬೆಳೆದದ್ದನ್ನೆಲ್ಲ ಅದು ನಗಣ್ಯಗೊಳಿಸುತ್ತದೆ ಎಂದು ನಕ್ಕಿದ್ದರು. ನಮ್ಮದು ಸ್ವಲ್ಪ ಕಾಂಪ್ಲಿಕೇಟೆಡ್ ಫ್ಯಾಮಿಲಿ ಎಂದು ತಮ್ಮ ಅಣ್ಣ ತಮ್ಮಂದಿರ ಬಗ್ಗೆ ವಿವರಿಸಿದ್ದರು. ಅವರೆಲ್ಲರ ಜೊತೆ ತುಂಬು ಪ್ರೀತಿಯಿಂದಿದ್ದರು.

ತಮ್ಮ ಅಕೆಡಮಿಕ್ ಬರವಣಿಗೆ ಮತ್ತು ಚಿಂತನೆಯಿಂದ ಹೆಸರು ಮಾಡಿದ್ದ ಪ್ರೊ. ಅಸ್ದಾದಿ‌ ನಿರಂತರವಾಗಿ ಕ್ರಿಯಾಶೀಲರಾಗಿದ್ದರು.

ಕುವೆಂಪು ವಿಶ್ವವಿದ್ಯಾಲಯದ ಸಿಎಸ್ಸೆಲ್ಸಿಯ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನಾವು ಆಮೇಲೆ ಅದರಿಂದ ದೂರವಾದೆವು. ಅದರದ್ದೇ ಒಂದು ವಿಚಾರ ಸಂಕಿರಣಕ್ಕೆ ಮೈಸೂರಿಗೆ ಹೋದಾಗ ನನ್ನನ್ನು ಮತ್ತು ಪ್ರೊ. ರಾಜಾರಾಮ್ ತೊಳ್ಪಾಡಿ ಅವರನ್ನು ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಮತ್ತೊಮ್ಮೆ ಮೈಸೂರಿನ‌ ಹೊರವಲಯದ ಕ್ಲಬ್ ಒಂದಕ್ಕೆ ನನ್ನನ್ನು ಊಟಕ್ಜೆ ಕರೆದೊಯ್ದಿದ್ದರು. ಹಾವೇರಿಯಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಒಮ್ಮೆ ಭಾಗವಹಿಸಿದಾಗ ಜೆ.ಎನ್.ಯು ನ ನೆನಪುಗಳನ್ನು ಕೆದಕಿ ಖುಷಿ ಪಟ್ಟಿದ್ದೆವು. ಒಂದೆರಡು ತಿಂಗಳ ಕೆಳಗೆ ತುಂಬಾ ಹಿಂದೆ “ಸಂಕ್ರಮಣ” ದಲ್ಲಿ ಪ್ರಕಟವಾದ ಅವರ ಕವಿತೆಯೊಂದನ್ನು ನಾನು ಅವರ ಪೋಸ್ಟ್ ಗೆ ಕಮೆಂಟ್ ರೂಪದಲ್ಲಿ ಹಾಕಿದಾಗ ನನ್ನ ಹಳೆಯ ಜೆಎನ್ಯೂ ಗೆಳೆಯ ಅಶೋಕ ಶೆಟ್ಟರ್ ನನ್ನ ಒಂದು ಹಳೆಯ ಕವಿತೆಯನ್ನು ಗಮನಕ್ಕೆ ತಂದಿದ್ದಾರೆ ಎಂದು ಒಂದು ಪೋಸ್ಟ್ ನಲ್ಲಿ ಅದನ್ನು ಹಂಚಿಕೊಂಡಿದ್ದರು.

ಕುಟುಂಬವತ್ಸಲರಾಗಿದ್ದ ಮುಝಾಪ್ಫರ್ ಗೆ ತಮ್ಮ ಮಗ ಮತ್ತು ಮಗಳ ಬಗ್ಗೆ ತುಂಬ ಪ್ರೀತಿ, ಅಭಿಮಾನ. ಮುಝಾಪ್ಫರ್ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಾಧ್ಯವಾಗಲಿ.