HMPV Virus | ಬೆಂಗಳೂರಿನಲ್ಲಿ ಎಚ್‌ಎಂಪಿವಿ ಎರಡು ಪ್ರಕರಣ ದೃಢ; ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ


ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವ ಎಚ್‌ಎಂಪಿವಿ ಸೋಂಕು ಮತ್ತೊಂದು ಕೋವಿಡ್ ಮಾದರಿಯ ಭೀತಿ ತಂದೊಡ್ಡಿದೆ. ಉತ್ತರ ಚೀನಾದಲ್ಲಿ ಅವ್ಯಾಹತವಾಗಿರುವ ಸೋಂಕಿನಿಂದ ಆಸ್ಪತ್ರೆಗಳು ಭರ್ತಿಯಾಗಿವೆ ಎಂಬ ವರದಿಗಳ ಬೆನ್ನಲ್ಲೇ ಕರ್ನಾಟಕದ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.


ಬೆಂಗಳೂರಿನಲ್ಲಿ 8 ತಿಂಗಳ ಮಗು ಹಾಗೂ 3 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ. ಆದರೆ, ಮಕ್ಕಳಲ್ಲಿ ಕಂಡು ಬಂದಿರುವ ಸೋಂಕಿಗೂ, ಚೀನಾದಲ್ಲಿ ಹರಡಿರುವ ಸೋಂಕಿಗೂ ಸಂಬಂಧವಿಲ್ಲ. ಶೀತಗಾಳಿಯಲ್ಲಿ ಹರಡುವ ಸಾಮಾನ್ಯ ವೈರಸ್ ಇದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಬೆಂಗಳೂರಿನಲ್ಲಿ ಪತ್ತೆಯಾದ ವೈರಸ್ ಚೀನಾದ ರೂಪಾಂತರವೇ ಎಂಬುದನ್ನು ಖಚಿತಪಡಿಸಿಲ್ಲ.

ಈ ಇಬ್ಬರು ಮಕ್ಕಳ ಪೋಷಕರಿಗೆ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ. ಹಾಗಾಗಿ ರೂಪಾಂತರ ತಳಿಯ ಬಗ್ಗೆ ಸ್ಪಷ್ಟತೆ ಇಲ್ಲ. ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ಕುರಿತು ಕೇಂದ್ರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಯಾರೂ ಕೂಡ ಆತಂಕ ಪಡಬಾರದು ಎಂದು ಆರೋಗ್ಯ ಇಲಾಖೆ ಹೇಳಿದೆ.


ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು

ಜ್ವರ, ಕೆಮ್ಮು ಹಾಗೂ ಶೀತದಿಂದ ಬಳಲುತ್ತಿದ್ದ 8 ತಿಂಗಳ ಮಗು ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿದೆ. 8 ವರ್ಷದ ಮಗುವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆ ಮಾಡಿದಾಗ ಎಚ್‌ಎಂಪಿವಿ ವೈರಸ್ ಇರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ಖಚಿತಪಡಿಸಿದೆ.

ಆದರೆ, ಈ ಸೋಂಕು ರೂಪಾಂತರವಾಗಿರುವ ಕುರಿತ ಮಾಹಿತಿ ಇಲ್ಲ. ಕೇಂದ್ರ ಆರೋಗ್ಯ ಇಲಾಖೆಗೂ ಸೋಂಕು ಪತ್ತೆಯಾಗಿರುವ ಸಂಬಂಧ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.



ಎಚ್‌ಎಂಪಿವಿ ವೈರಸ್ ಏನು?

ಚೀನಾದಲ್ಲಿ ಕಾಣಿಸಿಕೊಂಡ ಹ್ಯೂಮನ್ ಮೆಟಾನುಮೋ ವೈರಸ್(ಎಚ್‌ಎಂಪಿವಿ) ಸೋಂಕು ಒಂದು ಸಾಂಕ್ರಾಮಿಕ ವೈರಸ್. ಕೆಮ್ಮು, ಶೀತ ಹಾಗೂ ಜ್ವರದ ಕಾಣಿಸಿಕೊಂಡ ನಂತರ ಉಸಿರಾಟದ ಸಮಸ್ಯೆಗೆ ಕಾರಣವಾಗಲಿದೆ. ಸಣ್ಣ ಮಕ್ಕಳು ಹಾಗೂ ವಯಸ್ಕರಿಗೆ ಇದು ಮಾರಕವಾಗಿದೆ. ಎಚ್‌ಎಂಪಿವಿ ಸೋಂಕು ಹೊಸ ವೈರಸ್‌ ಅಲ್ಲ. 2001 ಕ್ಕೂ ಮುಂಚಿನಿಂದಲೇ ಇದೆ ಎಂದು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆ ಹೇಳಿದೆ. ಮತ್ತೆ ಕೆಲ ವರದಿಗಳ ಪ್ರಕಾರ ಎಚ್‌ಎಂಪಿವಿ ವೈರಸ್ 1958 ರಿಂದಲೇ ಇದೆ ಎನ್ನಲಾಗಿದೆ. ಶೀತ ಹವಾಗುಣದಲ್ಲಿ ಎಚ್‌ಎಂಪಿವಿ ಸೋಂಕು ತ್ವರಿತವಾಗಿ ಹರಡಲಿದೆ.


ಸೋಂಕಿನ ಲಕ್ಷಣಗಳು ಏನು?

ಎಚ್‌ಎಂಪಿವಿ ಸೋಂಕು ತಗುಲಿದರೆ ಮೊದಲು ವಿಷಮಶೀತ ಜ್ವರದಂತೆ ಕಾಣಿಸಿಕೊಳ್ಳಲಿದೆ. ಕೋವಿಡ್‌ ಸೋಂಕಿಗೂ, ಎಚ್‌ಎಂಪಿವಿ ಸೋಂಕಿಗೂ ಶೇ 99ರಷ್ಟು ಸಾಮ್ಯತೆ ಇದೆ. ಕೋವಿಡ್‌ ಅವಧಿಯಲ್ಲಿ ಬಳಸಿದ ಚಿಕಿತ್ಸಾ ಪದ್ಧತಿಯನ್ನೇ ಬಳಸಬಹುದಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ ಶಾರದಾ ತಿಳಿಸಿದರು.

ರೋಗ ಹರಡುವ ಕುರಿತು ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಎಚ್‌ಎಂಪಿವಿ ಹಳೆಯ ವೈರಸ್. ಭೌಗೋಳಿಕವಾಗಿ ಶೀತ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಪ್ರಸ್ತುತ ಶೀತ ಹವಾಗುಣ ಹೆಚ್ಚಿರುವುದರಿಂದ ಹರಡುವಿಕೆ ಕಾಣಿಸಿಕೊಳ್ಳುತ್ತಿದೆ. ರೋಗ ಲಕ್ಷಣ ಆಧರಿಸಿ ವಿಷಮ ಶೀತ ಜ್ವರಕ್ಕೆ ನೀಡುವ ಚಿಕಿತ್ಸೆ ನೀಡುವುದರಿಂದ ಗುಣವಾಗಲಿದೆ. ಮಕ್ಕಳು ಹಾಗೂ ವಯೋವೃದ್ಧರಿಗೆ ಇದರಿಂದ ಕೊಂಚ ಸಮಸ್ಯೆಯಾಗಬಹುದು ಎಂದು ತಿಳಿಸಿದರು.


ಎಚ್‌ಎಂಪಿವಿ- ಕೋವಿಡ್ ಸೋಂಕಿನ ವ್ಯತ್ಯಾಸವೇನು?

ಕೋವಿಡ್ ಸೋಂಕು ಸಾಂಕ್ರಾಮಿಕ ಕಾಯಿಲೆ. ಇದು SARS-CoV-2 ವೈರಸ್‌ನಿಂದ ಹರಡುತ್ತದೆ. ಆದರೆ, ಎಚ್‌ಎಂಪಿವಿ ಸೋಂಕಿಗೂ, ಕೋವಿಡ್‌ ಸೋಂಕಿಗೂ ಕೆಲ ಸಾಮ್ಯತೆಗಳಿವೆ. ಎರಡೂ ವೈರಸ್‌ನಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಕ್ಕಳು, ಹಿರಿಯರು, ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವ ಜನರಿಗೆ ಎರಡೂ ಕೂಡ ಅಪಾಯಕಾರಿ. ಆದರೆ, ಕೋವಿಡ್‌ಗೆ ಲಸಿಕೆ ಇದೆ. ಎಚ್‌ಎಂಪಿವಿಗೆ ಲಸಿಕೆ ಕಂಡು ಹಿಡಿದಿಲ್ಲ.


ಉತ್ತರ ಚೀನಾದಲ್ಲಿ ಎಚ್‌ಎಂಪಿವಿ ವೈರಸ್

ಡಿ.16 ಮತ್ತು 22 ರ ನಡುವೆ ಉತ್ತರ ಚೀನಾದಲ್ಲಿ ಉಸಿರಾಟದ ತೊಂದರೆ ಪ್ರಕರಣಗಳು ಹೆಚ್ಚಿವೆ. ರೋಗ ಲಕ್ಷಣ ಹೊಂದಿರುವ ಬಹುಪಾಲು ವ್ಯಕ್ತಿಗಳಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆಯಾಗಿತ್ತು. ಅತಿಯಾದ ಶೀತ ವಾತಾವರಣದಿಂದ ಉಸಿರಾಟದ ಸಮಸ್ಯೆ ಕಂಡುಬಂದಿದೆ ಎಂದು ಚೀನಾ ಹೇಳಿತ್ತು.

ದೇಶದ ಉತ್ತರ ಭಾಗದ ಪ್ರದೇಶಗಳಲ್ಲಿ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದೆ ಎಂಬುದನ್ನೂ ಚೀನಾ ದೃಢಪಡಿಸಿದ ಬಳಿಕ ಎಲ್ಲೆಡೆ ಆತಂಕ ಮನೆ ಮಾಡಿದೆ.


ಎಚ್‌ಎಂಪಿವಿ ಸೋಂಕು ಹರಡುವುದು ಹೇಗೆ?

ಸಾಮಾನ್ಯ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ತೀವ್ರಗೊಂಡು ನ್ಯುಮೋನಿಯಾಗೆ ಕಾರಣವಾಗಬಹುದು. ದೇಹದಲ್ಲಿ ಎಚ್‌ಎಂಪಿವಿ ವೈರಸ್ ಹೆಚ್ಚಾಗಲು ಕನಿಷ್ಠ 3 ರಿಂದ 6 ದಿನ ಸಮಯ ತೆಗೆದುಕೊಳ್ಳುತ್ತದೆ. ರೋಗಲಕ್ಷಣದ ತೀವ್ರತೆಯ ಆಧಾರದ ಮೇಲೆ ಸೋಂಕಿನ ಅವಧಿ ನಿರ್ಧರಿಸಲಾಗುತ್ತದೆ.

ಎಚ್‌ಎಂಪಿವಿ ಕೂಡ ಸಾಮಾನ್ಯ ವೈರಸ್‌ಗಳಂತೆ ಹರಡುತ್ತದೆ. ಕೆಮ್ಮು ಹಾಗೂ ಸೀನುವಾಗ ಎದುರಿಗೆ ಇರುವವರಿಗೆ ಸೋಂಕು ಹರಡುತ್ತದೆ.

ಕೋವಿಡ್‌ನಂತೆಯೇ ರೋಗ ಲಕ್ಷಣವಿರುವ ವ್ಯಕ್ತಿಯ ನಿಕಟ ಸಂಪರ್ಕದಿಂದ ಹರಡುತ್ತದೆ.


ಭಾರತದಲ್ಲಿ ಎಚ್‌ಎಂಪಿವಿ ಇದೆಯೇ?

ಭಾರತದಲ್ಲಿ ಎಚ್‌ಎಂಪಿವಿ ವೈರಸ್‌ ಹೊಸದೇನಲ್ಲ. ದೇಶದಲ್ಲಿ ಶೇ 0.78 ರಷ್ಟು ಎಚ್‌ಎಂಪಿವಿ ವೈರಸ್‌ ಇದೆ. ಆದರೆ, ಇದು ಚೀನಾದ ರೂಪಾಂತರವಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರಿನ 8ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹರಡುವ ಶೀತ, ಕೆಮ್ಮು ಹಾಗೂ ಜ್ವರವೇ ಆಗಿರುತ್ತದೆ. ಯಾರೂ ಕೂಡ ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದೆ.


ಎಚ್ ಎಂಪಿವಿಗೆ ಮುನ್ನಚ್ಚರಿಕೆ ಏನು?

ಕೋವಿಡ್‌ ಅವಧಿಯಲ್ಲಿ ಅನುಸರಿಸಿದ ಮಾರ್ಗಸೂಚಿಗಳನ್ನೇ ಇಲ್ಲಿಯೂ ಪಾಲಿಸಬೇಕಾಗಿರುತ್ತದೆ.

ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಸೋಂಕಿನಿಂದ ಪಾರಾಗಬಹುದು. ರೋಗ ಲಕ್ಷಣ ಇರುವವರು ಹೊರಗೆ ಬಾರದೇ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು.


ಆರೋಗ್ಯ ಸಚಿವರು ಏನಂತಾರೆ?

ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿರುವ ಹೆಚ್‌ಎಂಪಿವಿ ಸೋಂಕು ಹೊಸದೇನಲ್ಲ. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಾಧ್ಯತೆ ಇದೆ. ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ಮಕ್ಕಳು ಎಲ್ಲೂ ಓಡಾಡಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ವೈರಸ್ ಕಾಣಿಸಿಕೊಂಡಿರಬಹುದು. ಚೀನಾ ಸೋಂಕಿಗೂ ಇದಕ್ಕೂ ಸಂಬಂಧವಿಲ್ಲ. ವೈರಸ್ ಹರಡದಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ಗಾಬರಿಪಡುವ ಅವಶ್ಯಕತೆ ಇಲ್ಲ. ಕೇಂದ್ರದ ಆರೋಗ್ಯ ಇಲಾಖೆ ಹಾಗೂ ಐಸಿಎಂಆರ್ ಅಭಿಪ್ರಾಯ ಪಡೆದು ಮುಂದಿನ ಕ್ರಮದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.



ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

  • ಜ್ವರದ ಲಕ್ಷಣ ಹೊಂದಿರುವವರು ಜನನಿಬಿಡ ಪ್ರದೇಶದಿಂದ ದೂರ ಇರಬೇಕು. ಅನಗತ್ಯ ಓಡಾಟ ತಪ್ಪಿಸಬೇಕು.
  • ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು. ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಮಾಡಬೇಕು.
  • ಜ್ವರ, ಕೆಮ್ಮು, ನೆಗಡಿ ಹೊಂದಿರುವವರು ಮನೆಯಲ್ಲೇ ಇದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.
  • ಸೋಂಕಿತರು ಬಳಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸಬಾರದು.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಮನೆ ಮದ್ದು ಆಶ್ರಯಿಸದೇ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಬೇಕು.
  • ಮನೆ ಮತ್ತು ಸುತ್ತಲಿನ ಪ್ರದೇಶ, ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
  • ಸೋಂಕಿತರು ಹಾಗೂ ಪ್ರತಿಯೊಬ್ಬರು ನಿತ್ಯ ಪೌಷ್ಠಿಕಾಂಶವಿರುವ ಆಹಾರ ಸೇವಿಸಬೇಕು.