ಇಸ್ರೇಲ್ : ಬಹಳ ದಿನಗಳ ಬಳಿಕ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಯುದ್ದದ ಕಾರ್ಮೋಡ ಕಡಿಮೆಯಾಗುವ ಮುನ್ಸೂಚನೆ ದೊರೆತಿದೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ.
ಈ ಬಗ್ಗೆ ಮಧ್ಯವರ್ಥಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಗಾಝಾ ಪ್ರಾಂತ್ಯದಲ್ಲಿ ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ವಿನಾಶಕಾರಿ ಯುದ್ಧಕ್ಕೆ ವಿರಾಮ ಸಿಗಲಿದೆ.
ಖತರ್ ರಾಜಧಾನಿಯಲ್ಲಿ ವಾರಗಳ ಕಾಲ ನಡೆದ ಮಾತುಕತೆಗಳ ನಂತರ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ ಎನ್ನಲಾಗಿದೆ.
ಒಪ್ಪಂದಂತೆ, ಹಮಾಸ್ - ಇಸ್ರೇಲ್ ಪರಸ್ಪರ ಒತ್ತೆಸೆರೆಯಲ್ಲಿಟ್ಟಿರುವ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ಈ ಕದನ ವಿರಾಮವು ಧ್ವಂಸಗೊಂಡು ನಲುಗುತ್ತಿರುವ ಯುದ್ಧಪೀಡಿತ ಪ್ರದೇಶಕ್ಕೆ ಅತ್ಯಂತ ಅಗತ್ಯವಿರುವ ಮಾನವೀಯ ಸಹಾಯವನ್ನು ಒದಗಿಸಲಿದೆ.
ಖತಾರ್ ಮತ್ತು ಹಮಾಸ್‌ನ ಅಧಿಕಾರಿಗಳು ಒಪ್ಪಂದಕ್ಕೆ ಬಂದಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ಇಸ್ರೇಲ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಒಪ್ಪಂದವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಪುಟವು ಅನುಮೋದಿಸಬೇಕಾಗಿದೆ. ಆ ಬಳಿಕವಷ್ಟೇ ಕದನವಿರಾಮ ಒಪ್ಪಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಕದನವಿರಾಮ ಒಪ್ಪಂದದಂತೆ 6 ವಾರಗಳ ಕಾಲ ಯುದ್ಧವು ನಿಲ್ಲಲಿದೆ. ಈ ಮಧ್ಯೆ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಮಾತುಕತೆಗಳು ಸಹ ನಡೆಯಲಿದೆ.