ಮಂಗಳೂರು: ಕ್ರೀಡಾಪಟುಗಳು, ಕೋಚ್ ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಿ. ನಾನು ಕೊಡ್ತೀನಿ. ಆದರೆ ಒಲಂಪಿಕ್ ನಲ್ಲಿ ರಾಜ್ಯದ ಪಟುಗಳು ದೇಶಕ್ಕಾಗಿ ಮೆಡಲ್ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ಕರ್ನಾಟಕ ಕ್ರೀಡಾಕೂಟ 2025 ನ್ನು ಉದ್ಘಾಟಿಸಿ ಮಾತನಾಡಿದರು.
ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯ್ತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪುನರುಚ್ಚರಿಸಿದರು.
ಮುಂದಿನ ಬಜೆಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂ. ನಿಗಧಿ ಮಾಡ್ತೀನಿ ಎಂದು ಇದೇ ಸಂದರ್ಭ ಸಿಎಂ ಘೋಷಿಸಿದರು.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ.2ರಷ್ಟು ಉದ್ಯೋಗಗಳು ಕ್ರೀಡಾಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ ಪೊಲೀಸ್, ಅರಣ್ಯ ಇಲಾಖೆ ಸೇರಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಶೇ. 3ರಷ್ಟು ಉದ್ಯೋಗ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಿಸಿದರು.
ಒಲಿಂಪಿಕ್ಸ್ ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂ. ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್ ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದರು.
ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ ಸೇರಿ ಜಿಲ್ಲೆಯ ಶಾಸಕರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಮಂಗಳೂರು: ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಪ್ರಮುಖ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025(ರಾಜ್ಯ ಕ್ರೀಡಾಕೂಟ)ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಡಾ. ಕೆ. ಗೋವಿಂದರಾಜ್ ಮುಂತಾದ ಗಣ್ಯರು ಹಾಜರಿದ್ದರು.
ಕರ್ನಾಟಕ ಕ್ರೀಡಾಕೂಟ 2025 ಇದೇ ಜನವರಿ 23, 2025ರವರೆಗೆ ಮುಂದುವರಿಯಲಿದೆ. 23 ಕ್ರೀಡಾ ಕಾರ್ಯಕ್ರಮಗಳಲ್ಲಿ 3,247 ಅಥೀಟ್‌ಗಳು ಭಾಗವಹಿಸಲಿದ್ದಾರೆ. ಅಲ್ಲದೆ, 599 ಅಧಿಕಾರಿಗಳು ಈ ಕ್ರೀಡೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.
ಮಂಗಳೂರು ಮತ್ತು ಉಡುಪಿಗಳಲ್ಲಿ ಆಯೋಜಿಸಲಾಗುವ ಕ್ರೀಡಾ ಕಾರ್ಯಕ್ರಮಗಳಲ್ಲಿ ಫುಟ್ಬಾಲ್, ಹಾಕಿ, ಆರ್ಚರಿ(ಬಿಲ್ಲುಗಾರಿಕೆ), ಬಾಕ್ಸಿಂಗ್, ಜಿಮ್ಯಾಟಿಕ್ಸ್, ಕೊಕೊ, ಈಜು, ವುಷು, ಕಯಾಕ್ ಮತ್ತು ಕ್ಯಾನೊಯಿಂಗ್, ಅಥ್ಲೆಟಿಕ್ ಕೂಟ, ಸೈಕಲ್ ಸವಾರಿ, ಹ್ಯಾಂಡ್‌ಬಾಲ್, ಲಾನ್ ಟೆನ್ನಿಸ್, ಟೇಬಲ್ ಟೆನಿಸ್, ಕಬ್ಬಡಿ, ಬ್ಯಾಡ್ಮಿಂಟನ್, ಕತ್ತಿ ವರಸೆ(ಫೆನ್ಸಿಂಗ್), ನೆಟ್‌ಬಾಲ್, ಟೇಕ್ವಾಂಡೊ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಜುಡೊ, ಶೂಟಿಂಗ್, ವೇಟ್‌ಲಿಫ್ಟಿಂಗ್ ಮತ್ತು ರೆಸ್ಲಿಂಗ್(ಕುಸ್ತಿ) ಮುಂತಾದವುಗಳು ಸೇರಿವೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, `
ಕರ್ನಾಟಕ ಕ್ರೀಡಾಕೂಟ 2025ಕ್ಕೆ ಸುಮಾರು 5 ಕೋಟಿ ರೂ.ಗಳನ್ನು ಕರ್ನಾಟಕ ಸರ್ಕಾರ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಬೆಂಬಲವನ್ನು ನೀಡಲು ನಾವು ಇಚ್ಛಿಸುತ್ತೇವೆ. ಇದರಿಂದ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ಲಭಿಸಬಹುದಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ರಾಜ್ಯದ ಅಥೀಟ್‌ಗಳಿಗೆ ಗ್ರೇಸ್ ಮಾರ್ಕ್ಗಳನ್ನು ನೀಡುವಂತೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಅವರು ಮಾಡಿರುವ ಮನವಿಯನ್ನು ನಾನು ಸಂಪುಟದ ಮುಂದೆ ಇಡಲಿದ್ದೇನೆ. ಕ್ರೀಡಾ ಸೌಲಭ್ಯಗಳು ಮತ್ತು ಉಪಕರಣಗಳ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ ಮೂರು ಕೋಟಿ ನೀಡುವ ಯೋಜನೆಯನ್ನು ನಾನು ಹೊಂದಿದ್ದೇನೆ. ಒಲಂಪಿಕ್ ಕ್ರೀಡೆಗಳಲ್ಲಿ ಪದಕವನ್ನು ಗೆಲ್ಲುವ ರಾಜ್ಯದ ಅಥೀಟ್‌ಗಳಿಗೆ ಆರು ಕೋಟಿ ರೂ.ಗಳನ್ನು ನಾವು ನೀಡಲಿದ್ದೇವೆ. ಜೊತೆಗೆ ಏಷಿಯನ್ ಕ್ರೀಡೆಗಳು ಮತ್ತು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಅಥೀಟ್‌ಗಳಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಲಿದ್ದೇವೆ” ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ,
``ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಬಂದಿರುವ ಎಲ್ಲಾ ಅಥೀಟ್‌ಗಳನ್ನು ದಕ್ಷಣ ಕನ್ನಡ ಮತ್ತು ಉಡುಪಿಗೆ ನಾನು ಸ್ವಾಗತಿಸುತ್ತೇನೆ. ಈ ಪ್ರದೇಶದ ಅಥ್ಲೆಟ್‌ಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವುದು ಈ ಕ್ರೀಡೆಗಳನ್ನು ಇಲ್ಲಿ ನಡೆಸುವ ಮುಖ್ಯ ಕಾರಣವಾಗಿದೆ. ಈ ಕ್ರೀಡೆಗಳ ಆಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ವಂದನೆ ಸಲ್ಲಿಸುತ್ತೇನೆ” ಎಂದರು.
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜ್ ಅವರು ಮಾತನಾಡಿ, "ದಕ್ಷಣ ಕನ್ನಡ ಮತ್ತು ಉಡುಪಿಯ ಅಧಿಕಾರಿಗಳ ಕಠಿಣ ಪರಿಶ್ರಮ ಮತ್ತು ಸಮನ್ವಯ ಕಾರ್ಯದಿಂದಲೇ ಈ ಕ್ರೀಡಾಕೂಟ ನಡೆಯಲು ಸಾಧ್ಯವಾಗಿದೆ. ಒಟ್ಟಾರೆಯಾಗಿ 4500 ಸ್ಪರ್ಧಿಗಳು ಮತ್ತು ಅಧಿಕಾರಿಗಳು ಈ ಕ್ರೀಡೆಗಳ ಭಾಗವಾಗಿರುತ್ತಾರೆ. ರಾಜ್ಯದಲ್ಲಿ ಕ್ರೀಡೆಗೆ ಲಭ್ಯವಾಗುತ್ತಿರುವ ಷರತ್ತುರಹಿತ ಬೆಂಬಲಕ್ಕಾಗಿ ಕ್ರೀಡಾ ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ವಂದನೆ ಸಲ್ಲಿಸಬೇಕಾಗಿದೆ. ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ. 3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ಶೇ. 2ರಷ್ಟು ಉದ್ಯೋಗ ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ ಇವರು ಉದ್ಯೋಗಗಳಿಗಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿರುವುದಿಲ್ಲ” ಎಂದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾತನಾಡಿ, `ಈ ವರ್ಷ ರಾಜ್ಯ ಕ್ರೀಡಾಕೂಟ ಇಲ್ಲಿ ನಡೆಯುತ್ತಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶಕ್ಕೆ ಗೌರವದ ವಿಷಯವಾಗಿದೆ. ಯುವಜನರನ್ನು ಅಥ್ಲೆಟ್‌ಗಳಾಗಿ ರೂಪಿಸುವುದು ಮಾತ್ರವಲ್ಲದೆ, ಯುವಜನರು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಕ್ರೀಡೆ ಸಹಾಯ ಮಾಡುತ್ತದೆ. ಇದರಿಂದ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಈ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಎಲ್ಲಾ ಅಥೀಟ್‌ಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ತಮ್ಮ ಅತ್ಯುತ್ತಮ ಪ್ರತಿಭೆಗಳನ್ನು ಪ್ರದರ್ಶಿಸಿ ಕರ್ನಾಟಕ ರಾಜ್ಯವು ಭಾರತೀಯ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಕಾಶಿಸುವಂತೆ ಮಾಡಬೇಕೆಂದು ಎಲ್ಲಾ ಅಥೀಟ್‌ಗಳನ್ನು ನಾನು ಆಗ್ರಹಿಸುತ್ತೇನೆ. ಎಲ್ಲಾ ಸ್ಪರ್ಧಿಗಳಿಗೆ ಶುಭಾಶಯಗಳನ್ನು ಕೋರುತ್ತೇನೆ” ಎಂದರು.
ಅದ್ಭುತವಾದ ಸಾಂಸ್ಕೃತಿಕ ರೋಡ್ ಶೋವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಮಂಗಳಾ ಕ್ರೀಡಾಂಗಣದಲ್ಲಿ ಇದು ಮುಕ್ತಾಯವಾಗಿತ್ತು. ಈ ರೋಡ್ ಶೋಗೆ ಟಿಎಂ ಪೈ ಹಾಲ್‌ನಿಂದ ಯು.ಟಿ. ಖಾದರ್ ಅವರು ಚಾಲನೆ ನೀಡಿದ್ದರು. ಕ್ರೀಡೆಗಳನ್ನು ಸಂಭ್ರಮಿಸಿದ ಈ ಮೆರವಣಿಗೆಯಲ್ಲಿ ಕರ್ನಾಟಕದ ಸಮೃದ್ಧ ಸಂಪ್ರದಾಯಗಳು ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿಯ ರೋಮಾಂಚಕ ಸಂಸ್ಕೃತಿಯನ್ನು ಸಂಭ್ರಮಿಸಿತ್ತು. ಈ ಕಾರ್ಯಕ್ರಮದಲ್ಲಿ ಅಥೀಟ್‌ಗಳು ಸ್ಥಳೀಯ ಕ್ರೀಡಾ ಚಾಂಪಿಯನ್‌ಗಳು ಅಲ್ಲದೆ, ಪ್ರದರ್ಶನ ನೀಡಿದ 20 ತಂಡಗಳು ಸೇರಿದ್ದವು. ಉದ್ಘಾಟನಾ ಸಮಾರಂಭ ಈ ಮೆರವಣಿಗೆಯ ನಂತರ ನಡೆದಿತ್ತು. ಉದ್ಘಾಟನೆ ಸಮಾರಂಭದ ನಂತರ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಅಲ್ಲದೆ, ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಕರ್ನಾಟಕ ಕ್ರೀಡಾಕೂಟ 2025ಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗಾಯಕ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಅವರ ತಂಡದ ಪ್ರದರ್ಶನ ರಂಜಿಸಿತ್ತು.