ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಸ್ಥಳ ಮಾಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರಿಂದ ಗುಂಡೇಟು..!


ಮಂಗಳೂರು: ರಾಜ್ಯದಲ್ಲಿ ಸದ್ದು ಮಾಡಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ನಡೆದಿದೆ. ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ.
ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್‌ ನಗರ ನಿವಾಸಿ ಕಣ್ಣನ್‌ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕರ್ನಾಟಕ – ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ಸ್ಥಳ ಮಹಜರು ಮಾಡುವ ವೇಳೆ ತಪ್ಪಿಸಿಕೊಳ್ಳುವ ಕಣ್ಣನ್‌ ಮಣಿ ಯತ್ನ ನಡೆಸಿದ್ದ ಎಂದು ವರದಿಯಾಗಿದೆ.





ಆಗಿದ್ದೇನು?

ತಪಾಸಣೆಯ ಸಮಯದಲ್ಲಿ, ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳದಲ್ಲಿ ದೊರೆತ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿ ಅಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿಯು ತನಿಖಾಧಿಕಾರಿ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ತಳ್ಳಿ, ಅವರಿಗೆ ಇರಿದು ಕೊಲ್ಲಲು ಪ್ರಯತ್ನಿಸಿದ್ದಾನೆ. ಜೊತೆಗಿದ್ದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದ ಎಚ್ಚರಿಕೆಯ ಹೊರತಾಗಿಯೂ, ಆರೋಪಿಯು ತನ್ನ ಹಲ್ಲೆಯನ್ನು ಮುಂದುವರೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.


ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಉಳ್ಳಾಲ ಪಿ.ಎಸ್. ಇನ್ಸ್‌ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿ.ಸಿ. ಅಂಜನಪ್ಪ ಮತ್ತು ಉಳ್ಳಾಲ ಪಿ.ಎಸ್. ಪಿ.ಸಿ. ನಿತಿನ್ ಅವರಿಗೆ ಗಾಯಗಳಾಗಿವೆ.

ಮೂವರ ಬಂಧನ

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ. ರೋಡ್‌ ಶಾಖೆಯಲ್ಲಿ ಜ. 17ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದರು.

ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಅಮ್ಮಕೋವಿಲ್‌ ನಿವಾಸಿ ಮುರುಗಂಡಿ ಥೇವರ್‌ (36) ನನ್ನು ಆತನ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಮುಂಬಯಿಯ ಡೊಂಬಿವಿಲಿ ಪಶ್ಚಿಮ ಗೋಪಿನಾಥ್‌ ಚೌಕ್‌ ರಾಮ್ಕಾಭಾಯಿ ನಿವಾಸಿ ಯೋಸುವಾ ರಾಜೇಂದ್ರನ್‌ (35) ಮತ್ತು ಮುಂಬಯಿ ಚೆಂಬೂರು ತಿಲಕ್‌ನಗರ ನಿವಾಸಿ ಕಣ್ಣನ್‌ ಮಣಿ (36) ಬಂಧಿತ ಇನ್ನಿಬ್ಬರು ಆರೋಪಿಗಳು. ತಿರುನಲ್ವೇಲಿಯ ಬೇರೆ ಬೇರೆ ಸ್ಥಳಗಳಿಂದ ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಕೃತ್ಯದ ವೇಳೆ ಬಳಸಲಾದ ಫಿಯೆಟ್‌ ಕಾರು, ಕಳವು ಮಾಡಲಾದ ಎರಡು ಗೋಣಿಚೀಲ ಚಿನ್ನ, ಎರಡು ತಲವಾರು, ಪಿಸ್ತೂಲು, 3 ಸಜೀವ ಮದ್ದು ಗುಂಡುಗಳನ್ನು ಪಡಿಸಿಕೊಳ್ಳಲಾಗಿದೆ