ಮಂಗಳೂರು: ರಾಜ್ಯದ ಮೊದಲ ಮಂಕಿ ಪಾಕ್ಸ್‌ ಪ್ರಕರಣ ದೃಢ: ದಕ್ಷಿಣ ಕನ್ನಡದಲ್ಲಿ ನಿಗಾ| ದುಬೈಯಿಂದ ಮಂಗಳೂರಿಗೆ ಬಂದ ವ್ಯಕ್ತಿಯಿಂದ ಕಾಯಿಲೆ ಪತ್ತೆ

ಮಂಗಳೂರು: ಈ ವರ್ಷದ ರಾಜ್ಯದ ಮೊದಲ ಮಂಕಿ ಪಾಕ್ಸ್‌ ಪ್ರಕರಣ ದಕ್ಷಿಣ ಕನ್ನಡದಲ್ಲಿ ದೃಢಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ.


ವಿಮಾನದ ಮೂಲಕ ಬರುವವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮುನ್ನೆಚ್ಚರಿಕೆ ಉದ್ದೇಶಕ್ಕೆ ವೆನ್ಲಾಕ್‌ ಆಸ್ಪತ್ರೆಯಲ್ಲಿ 6 ಐಸಿಯು ಬೆಡ್‌ಗಳನ್ನು ಮೀಸಲಿಡಲಾಗಿದೆ. ಅವಶ್ಯವಿದ್ದರೆ ಮತ್ತಷ್ಟು ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ “ಮಂಕಿ ಪಾಕ್ಸ್‌ ಸೋಂಕು ಹರಡುವುದು ಕಡಿಮೆಯಾಗಿರುವ ಕಾರಣ ಆತಂಕಪಡುವ ಅಗತ್ಯವಿಲ್ಲ, ಜಾಗರೂಕತೆ ಅವಶ್ಯ. ಚರ್ಮದ ಮೇಲೆ ಗುಳ್ಳೆಗಳ ಜತೆಗೆ ಜ್ವರ, ತಲೆನೋವು, ಮೈಕೈ ನೋವು, ಶೀತ, ಗಂಟಲು ನೋವು, ಕೆಮ್ಮು ಇದ್ದರೆ ಕೂಡಲೇ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವ್ಯಕ್ತಿ ಚೇತರಿಕೆ
ದುಬಾೖಯಿಂದ ಜ.17ರಂದು ಬಂದಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಲಕ್ಷಣ ಕಂಡು ಬಂದಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸುತ್ತಿದ್ದಾರೆ ಎಂದು ವೈದ್ಯರ ಮೂಲಗಳು ತಿಳಿಸಿವೆ.