ಮಂಗಳೂರು: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್ ಮುಲ್ಕಿ ‌ ಮೃತ್ಯು


ಮಂಗಳೂರು: ಸೌದಿ ಅರೇಬಿಯದ ರಿಯಾದ್‌ನಲ್ಲಿ ಜ. 26ರಂದು ವಾಹನ ಚಲಾಯಿಸುತ್ತಿದ್ದಾಗಲೇ ಕ್ರಿಕೆಟಿಗ ಮನ್ಸೂರ್‌ ಮೂಲ್ಕಿ (41) ಅವರು ಹೃದಯಾಘಾತಕ್ಕೆ ಒಳಗಾಗಿ ಸೌದಿ ಕಾಲಮಾನ ಸಂಜೆ 4 ಗಂಟೆಗೆ ಸಾವಿಗೀಡಾದರು. ಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಮೂಲತಃ ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದವರು. ಮೂಲ್ಕಿ ಕಾರ್ನಾಡಿನ 7-ಸ್ಟಾರ್‌ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಹಾಗೂ ಮಾನೀಷ್‌ ಯೂತ್‌ ಕ್ಲಬ್‌ನ ಸದಸ್ಯರಾಗಿದ್ದ ಅವರು ಸಾವು ಸಂಭವಿಸುವ 15 ನಿಮಿಷದ ಮೊದಲು ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್‌ನಲ್ಲಿ ತಾಯಿಯ ಜತೆಗೆ ಮಾತನಾಡಿದ್ದರು.

ಸೌದಿಯಲ್ಲೇ ನಡೆಯಲಿದೆ ಅಂತ್ಯಕ್ರಿಯೆ
ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಸೌದಿಯಲ್ಲೇ ನಡೆಯಲಿದ್ದು, ಅವರ ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಬಾವ ಸೇರಿ 6 ಜನರ ಪ್ರಯಾಣಕ್ಕೆ ಮನ್ಸೂರ್‌ ಅವರು ಉದ್ಯೋಗದಲ್ಲಿ ಇರುವ ಸಂಸ್ಥೆಯ ಹೆಜಮಾಡಿ ಮೂಲದ ಮಾಲಕ, ಉದ್ಯಮಿ ಸಿರಾಜ್‌ ಅವರು ಕುಟುಂಬದವರ ಸೌದಿ ಪ್ರಯಾಣ ಹಾಗೂ ಇತರ ವ್ಯವಸ್ಥೆಯನ್ನು ಮಾಡಿದ್ದಾರೆ. ಸಿರಾಜ್‌ ಅವರು ಇತ್ತೀಚೆಗಷ್ಟೇ ಊರಿಗೆ ಬಂದಿದ್ದು, ವಾಪಸ್‌ ಸೌದಿಗೆ ತೆರಳಿದ್ದರು. 15 ವರ್ಷಗಳಿಂದ ಅವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.