Mangaluru: ಕೋಟೆಕಾರು ಸಹಕಾರಿ ಸಂಘ ದರೋಡೆ ಪ್ರಕರಣ: ತನಿಖಾ ತಂಡಕ್ಕೆ ಮಹತ್ವದ ಸುಳಿವು ಲಭ್ಯ


ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್‌ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿರುವುದಾಗಿ ತಿಳಿದುಬಂದಿದ್ದು, ಇದೊಂದು ಹೊರರಾಜ್ಯದ ಕುಖ್ಯಾತ ಗ್ಯಾಂಗ್‌ನ ಕೃತ್ಯವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹರಿಯಾಣದ ಗ್ಯಾಂಗೊಂದು ಕಳೆದ ವರ್ಷ ಕೇರಳದ ತ್ರಿಶ್ಯೂರ್‌ನಲ್ಲಿ ಎಟಿಎಂ ಲೂಟಿ ಮಾಡಿತ್ತು. ಅದೇ ಗ್ಯಾಂಗ್‌ನ ಸದಸ್ಯರು ಅಥವಾ ಅದೇ ಗ್ಯಾಂಗ್‌ ಹೋಲುವ ಬೇರೊಂದು ತಂಡ ಕೋಟೆಕಾರಿನಲ್ಲೂ ದರೋಡೆ ನಡೆಸಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದು, ಇದನ್ನು ಪುಷ್ಟೀಕರಿಸುವಂತಹ ಸುಳಿವು ಲಭಿಸಿದೆ ಎನ್ನಲಾಗಿದೆ. ಒಂದು ತನಿಖಾ ತಂಡ ಉತ್ತರ ಭಾರತದ ರಾಜ್ಯಗಳಿಗೂ ತೆರಳಿರುವ ಮಾಹಿತಿ ಇದೆ.



ಕಾರಿನ ಅಸಲಿ ಮಾಲಕ ಪತ್ತೆ ?
ಕೋಟೆಕಾರು ವ್ಯ.ಸೇ.ಸ.ಸಂಘದಲ್ಲಿ ದರೋಡೆ ನಡೆಸಿದವರು ಬಂದಿದ್ದ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿದ್ದರೂ ಅದರ ನಿಜವಾದ ಮಾಲಕನ ಪತ್ತೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆತನ ಮೂಲಕವೇ ಪ್ರಕರಣವನ್ನು ಭೇದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.



ಮೊಬೈಲ್‌ಗ‌ಳು ವಶಕ್ಕೆ
ಸಹಕಾರಿ ಸಂಘಕ್ಕೆ ಸಿಸಿಕೆಮರಾ ಅಳವಡಿಸಿದ್ದ ತಂತ್ರಜ್ಞರು ಹಾಗೂ ಸಂಘಕ್ಕೆ ಚಿನ್ನ ಮೌಲ್ಯಮಾಪನಕ್ಕೆ ಬರುತ್ತಿದ್ದವರ ಮನೆಗಳಲ್ಲಿ ಪೊಲೀಸರು ಶೋಧ ನಡೆಸಿದ್ದು, ಅವರ ಮೊಬೈಲ್‌ ಸಹಿತ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ಲ್ಯಾಕ್ ಗೋಲ್ಡ್‌ ಮಾರ್ಕೆಟ್‌ ಮೇಲೆ ನಿಗಾ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಒಯ್ದಿರುವ ದರೋಡೆಕೋರರು ಅದನ್ನು ಮಾರಾಟ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗೋಲ್ಡ್‌ ಮಾರ್ಕೆಟ್‌ಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಮುಖ್ಯವಾಗಿ ಕೇರಳ, ತಮಿಳುನಾಡು, ಮುಂಬಯಿಯ ಬ್ಲ್ಯಾಕ್ ಗೋಲ್ಡ್‌ ಮಾರ್ಕೆಟ್‌ಗಳ ಮೇಲೆ ಸ್ಥಳೀಯ ಪೊಲೀಸರ ನೆರವಿನಿಂದ ನಿಗಾ ಇಡಲಾಗುತ್ತಿದೆ. ಈಗಾಗಲೇ ಎರಡು ತಂಡಗಳು ಮುಂಬಯಿಗೆ ತೆರಳಿದೆ.



ಮಂಗಳೂರಿಗೆ ಬಂದ ಕಾರಿನಲ್ಲೇ ಚಿನ್ನ, ನಗದು?
ದರೋಡೆ ನಡೆಸಿದ ಬಳಿಕ ಆರೋಪಿಗಳು ಒಂದು ಕಾರಿನಲ್ಲಿ ಮಂಗಳೂರು ಕಡೆಗೆ ಬಂದಿದ್ದು, ಸಂಪೂರ್ಣ ಚಿನ್ನಾಭರಣ ಹಾಗೂ ನಗದು ಅದರಲ್ಲೇ ಇತ್ತು. ಇನ್ನೊಂದು ಕಾರು ಪೊಲೀಸ್‌ ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ಮಾತ್ರ ತಲಪಾಡಿಯ ಟೋಲ್‌ ಮೂಲಕ ಕೇರಳ ಕಡೆಗೆ ಸಂಚರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದರೋಡೆ ವೇಳೆ ಬಳಸಲಾದ ಫಿಯೆಟ್‌ ಕಾರು ಉಡುಪಿ ಕಡೆಯಿಂದ ಬಂದಿದ್ದು, ಹೆಜಮಾಡಿ ಟೋಲ್‌ನಲ್ಲಿ ದಾಟಿರುವ ವೀಡಿಯೋ ಸಿಕ್ಕಿದೆ.



ಹಲವರ ವಿಚಾರಣೆ
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಸಹಕಾರ ಸಂಘಕ್ಕೆ ಸಂಬಂಧಪಟ್ಟ ಹಲವರನ್ನು ವಿಚಾರಣೆ ನಡೆಸಲಾಗಿದೆ. ಈ ಹಿಂದೆ 2017ರಲ್ಲಿ ದರೋಡೆ ನಡೆದ ಸಂದರ್ಭದಲ್ಲಿ ಹಲವರನ್ನು ಅನುಮಾನ ಮೇಲೆ ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮಾತ್ರವಲ್ಲದೆ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.



ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ತಪಾಸಣೆ
ಮಂಗಳೂರು ನಗರ ಮತ್ತು ಹೊರವಲಯಗಳಲ್ಲಿ ಚೆಕ್‌ ಪೋಸ್ಟ್‌ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನಗಳ ತಪಾಸಣೆ ಬಿಗಿಗೊಳಿಸಲಾಗಿದೆ. ಮಂಗಳೂರಿನ ನಂತೂರು ಮತ್ತು ಕೊಟ್ಟಾರ ಚೌಕಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ.



ಪೊಲೀಸರಿಂದ ಸೊಸೈಟಿ ಮುಖ್ಯಸ್ಥರ ಸಭೆ
ಕೋಟೆಕಾರು ದರೋಡೆ ಬಳಿಕ ದ.ಕ. ಪೊಲೀಸ್‌ ಇಲಾಖೆ ಸೊಸೈಟಿ ಮುಖ್ಯಸ್ಥರ ಸಭೆ ನಡೆಸಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್‌ ಠಾಣೆಗಳಲ್ಲಿ ಸಭೆ ನಡೆಸಲಾಗಿದೆ. ಬ್ಯಾಂಕ್‌, ಸೊಸೈಟಿಗಳ ಭದ್ರತೆ ಕುರಿತಂತೆ ಸೂಕ್ತ ಕಾನೂನು ತಿಳಿವಳಿಕೆ ನೀಡಲಾಗಿದೆ. ಬ್ಯಾಂಕ್‌ಗಳ ಭದ್ರತೆ ಕುರಿತಂತೆ ಖಾತ್ರಿಪಡಿಸಲು ಹಾಗೂ ಸೆಕ್ಯೂರಿಟಿ ನೇಮಕ, ಸಿಸಿ ಕೆಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ.



ಒಬ್ಬ ದರೋಡೆಕೋರ
ರೈಲಿನಲ್ಲಿ ಪ್ರಯಾಣ?
ಕೆ.ಸಿ.ರೋಡ್‌ನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಮೂವರು ದರೋಡೆಕೋರರ ಪೈಕಿ ಓರ್ವ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ರೈಲಿನ ಮೂಲಕ ತೆರಳಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಆತ ರೈಲಿನಲ್ಲಿ ಮುಂಬಯಿಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ ತನ್ನೊಂದಿಗೆ ಒಂದಷ್ಟು ಪ್ರಮಾಣದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಆ ಮೂಲಕ ದರೋಡೆಕೋರರು ಮೂರು ಭಾಗವಾಗಿ ಪ್ರತ್ಯೇಕಗೊಂಡಿದ್ದಾರೆ ಎನ್ನುವುದು ಬಲ್ಲ ಮೂಲಗಳಿಂದ ಲಭ್ಯವಾದ ಮಾಹಿತಿ.



ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ದರೋಡೆ ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ಬಗ್ಗೆ ತನಿಖಾ ತಂಡಗಳಿಗೆ ಸಾಕಷ್ಟು ಸುಳಿವು ಲಭ್ಯವಾಗಿದೆ. ಎಲ್ಲ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು.
– ಅನುಪಮ್‌ ಅಗರ್ವಾಲ್‌,
ಮಂಗಳೂರು ನಗರ ಪೊಲೀಸ್‌ ಆಯುಕ್ತ



4 ನಿಮಿಷದ ದಾರಿಗೆ 10 ನಿಮಿಷ ತೆಗೆದುಕೊಂಡದ್ದು ಯಾಕೆ?
ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ದರೋಡೆಗೆ ಸಂಬಂಧಿಸಿ ಪೊಲೀಸ್‌ ತಂಡಗಳು ವಿವಿಧೆಡೆ ತೆರಳಿ ತನಿಖೆ ನಡೆಸುತ್ತಿದ್ದು, ಇನ್ನೊಂದು ತಂಡ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತವಾಗಿದೆ.



ದರೋಡೆಕೋರರು ಸಾಗಿದ ಮಾರ್ಗಗಳು ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ಆರು ಮಂದಿ ಇದ್ದ ದರೋಡೆಕೋರರು ಬಳಸಿದ್ದ ಕಾರು ತಲಪಾಡಿ ಟೋಲ್‌ಗೇಟ್‌ ದಾಟುವಾಗ ಕೇವಲ ಇಬ್ಬರು ಮಾತ್ರ ಇದ್ದದ್ದು ಅನುಮಾನಕ್ಕೆ ಕಾರಣವಾದರೆ, ದರೋಡೆ ಸ್ಥಳದಿಂದ ಟೋಲ್‌ಗೇಟ್‌ ತಲುಪಲು 3ರಿಂದ 4 ನಿಮಿಷವಿದ್ದರೆ, ಇಲ್ಲಿ 10 ನಿಮಿಷ ತೆಗೆದುಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಕೆ.ಸಿ.ರೋಡ್‌ ಮತ್ತು ಟೋಲ್‌ಗೇಟ್‌ ನಡುವಿನ ಪ್ರದೇಶದಲ್ಲಿ ದರೋಡೆಕೋರರು ಕಾರು ಅಥವಾ ಬೇರೆ ವಾಹನವನ್ನು ಬಳಸಿರುವುದು ಖಚಿತವಾಗಿದೆ. ಟೋಲ್‌ಗೇಟ್‌ ದಾಟಿರುವ ಕಾರಿ ನಲ್ಲಿ ಚಿನ್ನಾಭರಣಗಳು ಇರಲಿಲ್ಲ ಎನ್ನಲಾಗಿದ್ದು, ಅವರು ಯಾವ ವಾಹನಕ್ಕೆ ಚಿನ್ನಾಭರಣಗಳನ್ನು ವರ್ಗಾ ಯಿಸಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಕೆ.ಸಿ. ರೋಡ್‌ – ತಲಪಾಡಿ ನಡುವೆ ಇಬ್ಬರು ಇಳಿದು ನಡೆದುಕೊಂಡು ಹೋಗಿರುವ ಮಾಹಿತಿಯ ಹಿಂದೆ ತನಿಖೆಯನ್ನು ಕೇಂದ್ರೀಕರಿಸಿದ್ದು, ಸ್ಥಳೀಯರ ಕೈವಾಡಕ್ಕೆ ಪುಷ್ಟಿ ದೊರೆತಿದೆ. ಬ್ಯಾಂಕ್‌ ಆಡಳಿತ ಮಂಡಳಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ.



ಹಿಂದೆ ದರೋಡೆ
ಯತ್ನಿಸಿದವರ ವಿಚಾರಣೆ
2017ರ ಜೂನ್‌ ತಿಂಗಳಲ್ಲಿ ನಡೆದ ದರೋಡೆಕೋರರಾಗಿ ಬಂಧಿತರಾಗಿದ್ದ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಹಿಂದಿನ ಪ್ರಕರಣದಲ್ಲಿ ಬ್ಯಾಂಕ್‌ ನಿರ್ದೇಶಕಿಯೊಬ್ಬರ ಪತಿ ಆರೋಪಿಯಾಗಿದ್ದು, ಇದೇ ಮಾದರಿ ಯಲ್ಲಿ ಈ ಬಾರಿಯೂ ತನಿಖೆಯನ್ನು ಕೇಂದ್ರೀಕರಿಸಲಾಗಿದೆ. ಈ ನಡುವೆ ಕೊನೆಯ ಕ್ಷಣದಲ್ಲಿ ಶಾಖೆಗೆ ಭೇಟಿ ನೀಡಿದವರ ತನಿಖೆಯೂ ನಡೆದಿದೆ.