ಅತ್ತ ಕಾಂಗ್ರೆಸ್‌ನಿಂದ ಅಧಿಕಾರ ಕಸಿಯಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಇತ್ತ ಬಿಜೆಪಿಯ ಪ್ರಮುಖ ನಾಯಕರುಗಳನ್ನೇ ತನ್ನತ್ತ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಸದ್ಯ ಯಾವ ಚುನಾವಣೆಗಳು ಇಲ್ಲದೇ ಇದ್ದರೂ ಸಹ ಪಕ್ಷಾಂತರ ಮುಂದುವರಿದಿದ್ದು, ಇದೀಗ ಬಿಜೆಪಿಯ ಪ್ರಬಲ ನಾಯಕ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನುವ ವಿಚಾರವನ್ನು ಪ್ರೀತಂ ಗೌಡ ಆಪ್ತರೊಬ್ಬರು ಬಹಿರಂಗ ಪಡಿಸಿದ್ದಾರೆ. ಬಿಜೆಪಿಯ ಯುವ ಮುಖಂಡರಲ್ಲಿ ಪ್ರಮುಖರಾಗಿರುವ ಪ್ರೀತಂ ಗೌಡ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನನಗೆ ಯಾವುದೇ ಭವಿಷ್ಯವಿಲ್ಲ ಎನ್ನುವ ಅಸಮಾಧಾನದಿಂದ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರೀತಂ ಗೌಡ ಬಿಜೆಪಿ ಪಕ್ಷ ತೊರೆಯಲು ಸಿದ್ಧರಾಗಿರುವುದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಪ್ರೀತಂ ಗೌಡ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಹಾಗೂ ಬಿಜೆಪಿಗೆ ಸಂಬಂಧಪಟ್ಟ ವೇದಿಕೆಗಳಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಪಕ್ಷವನ್ನೂ ಹೊರತು ಪಡಿಸಿ ತನ್ನದೇ ಆದ ಕಾರ್ಯಕರ್ತರ ಬಲ ಹಾಗೂ ಸಂಘಟನೆ ಹೊಂದಿರುವ ಪ್ರೀತಂ ಗೌಡ ಸದ್ಯ ಪಕ್ಷಾಂತರಕ್ಕೆ ಸಜ್ಜಾದ ಬಗ್ಗೆ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ.
ಬಿಜೆಪಿ ವಿರುದ್ಧ ಪ್ರೀತಂ ಗೌಡ ಅಸಮಾಧಾನ ಯಾಕೆ?
ಬಿಜೆಪಿ ವಿರುದ್ಧ ಅದೇ ಪಕ್ಷದ ನಾಯಕ ಪ್ರೀತಂ ಗೌಡ ಅಸಮಾಧಾನಕ್ಕೆ ಪ್ರಮುಖ ಕಾರಣವೇ ಬಿಜೆಪಿ-ಜೆಡಿಎಸ್ ಮೈತ್ರಿ. ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದ ವಿರುದ್ಧ ಹೋರಾಡಿಕೊಂಡು ಹಾಸನದಲ್ಲಿ ಬಿಜೆಪಿ ಬಲಗೊಳಿಸಿದ್ದ ಪ್ರೀತಂ ಗೌಡಗೆ ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ನುಂಗಲಾರದ ತುತ್ತಾಗಿದೆ. ಹೀಗಾಗಿ ಇದೇ ಕಾರಣಕ್ಕೆ ಅವರು ಬಿಜೆಪಿ ತೊರೆದು ಸದ್ಯ ರಾಜ್ಯದಲ್ಲಿ ಆಡಳಿತರೂಢ ಪಕ್ಷವಾಗಿರುವ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಪ್ರೀತಂ ಗೌಡ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಭಾರೀ ಲಾಭ
ಒಂದು ವೇಳೆ ಪ್ರೀತಂ ಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ ಪಕ್ಷಕ್ಕೆ ಭಾರೀ ಲಾಭವಾಗಲಿದೆ. ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಹಾಸನದಲ್ಲಿ ಕಾಂಗ್ರೆಸ್ ಮತ್ತೆ ಪಾರುಪತ್ಯ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಉತ್ಸುಕರಾಗಿದ್ದಾರೆ. ಇದೀಗ ಪ್ರೀತಂ ಗೌಡ ಪಕ್ಷ ಸೇರ್ಪಡೆಗೊಂಡರೆ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗುತ್ತದೆ. ಸದ್ಯ ಹಾಸನದಲ್ಲಿ ಯಾವುದೇ ಪಕ್ಷ ಪ್ರಬಲವಾಗಿರದ ಕಾರಣ ಪ್ರೀತಂ ಗೌಡ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರೀತಂ ಗೌಡ ಈವರೆಗೂ ಯಾವುದೇ ಅಧೀಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ಅವರ ಮುಂದಿನ ನಿರ್ಧಾರವನ್ನು ಕಾದು ನೋಡಬೇಕಿದೆ.