ಪಾಣಾಜೆ: ಪಾಣಾಜೆ ವಿದ್ಯಾವರ್ಧಕ ಸಂಘ ಹಾಗೂ ಸುಬೋಧ ಪ್ರೌಢಶಾಲೆ ಪಾಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜ: 4 ರಂದು ಸಂಘದ ಉಪಾಧ್ಯಕ್ಷ ಕಡ0ದೇಲು ಈಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ,ಬೋಶ್ ಕಂಪನಿಯಲ್ಲಿ ಡಿಸ್ಟ್ರಿಬ್ಯೂಷನ್ ಮೆನೇಜರ್ ಆಗಿ ಉದ್ಯೋಗದಲ್ಲಿರುವ ಜಯಕುಮಾರ್ ರೈ ಕೋಟೆ ಅವರು ತಾನು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನೆನಪಿಸುತ್ತ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಪ್ರಯತ್ನಿಸಿ ಗುರಿ ಸಾಧಿಸಬೇಕು ಎಂದು ಕರೆ ಇತ್ತರು.
ಇನ್ನೋರ್ವ ಮುಖ್ಯ ಅತಿಥಿ ಪಾಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮೈಮುನತುಲ್ ಮೆಹ್ರ ವಿದ್ಯಾರ್ಥಿಗಳು ಶಾಲೆಯಲ್ಲಿ, ಸಮಾಜದಲ್ಲಿ ಶಿಸ್ತಿನಿಂದ ಇರಬೇಕು ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ರಕ್ಷಕಶಿಕ್ಷಕ ಸಂಘದ ಅಧ್ಯಕ್ಷರಾದ ಡಾ ಹಾಜಿ ಎಸ್ ಅಬೂಬಕ್ಕರ್ ಅವರು ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದೆ, ಹೊರ ತರುವ ಕೆಲಸ ನಾವು ಮಾಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳ ಪೋಷಕರು ಹೆಚ್ಚೆಚ್ಚು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು ಅಂದರು.
ಪ್ರತಿಭಾ ಪುರಸ್ಕಾರ:- 2023-2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಮುಹಮ್ಮದ್ ಅಪ್ಸಲ್, ಚೈತನ್ಯ ಜಿ ಹಾಗೂ ಗ್ರೀಷ್ಮ ಎ ಇವರಿಗೆ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಇವರು ವೈಯಕ್ತಿಕವಾಗಿ ಪ್ರತಿ ವರ್ಷ ನೀಡುತ್ತಾ ಬಂದಂತೆ ಶಾಲು ಹೊದೆಸಿ, ಫಲ ಪುಷ್ಪ, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಹಮ್ಮದ್ ಅಫ್ಜಲ್ ಅವರಿಗೆ ಶಾಲಾ ಹಿರಿಯ ಶಿಕ್ಷಕಿ ನಿರ್ಮಲ ಅವರು ಚಿನ್ನದ ಪದಕವನ್ನು ನೀಡಿ ಗೌರವಿಸಿದರು.
ಸಮಾಜ ವಿಜ್ಞಾನದಲ್ಲಿ 100 ಅಂಕಗಳಿಸಿದ ಶ್ರೀಜಶ್ರೀ ಕುಮಾರಿಗೆ ಸಹ ಶಿಕ್ಷಕಿ ವಿನುತಾ ಕುಮಾರಿ ಹಾಗೂ ಸಂಚಾಲಕರು ನಗದು ಬಹುಮಾನ ನೀಡಿ ಗೌರವಿಸಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ದತ್ತಿನಿಧಿ ಹಾಗೂ ಬಹುಮಾನಗಳನ್ನು ವಿತರಿಸಿದರು.2023-2024 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶಾಲು ಹೊದೆಸಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು.
ಸುಬೋಧ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ, ಸೀನಿಯರ್ ಹ್ಯೂಮನ್ ರೆಸೊರ್ಸ್ ಮ್ಯಾನೇಜರ್ ಇನ್ಫೋಸಿಸ್, ಮಗಳೂರು ಇವರು ಕಳೆದ ಸಾಲಿನಲ್ಲಿ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡೋತ್ಸವದಲ್ಲಿ ಅತಿಹೆಚ್ಚು ಅಂಕಗಳಿಸಿದ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರೂ 2000/-ದಂತೆ ಪ್ರತಿ ವರ್ಷ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಅದನ್ನು ಇಂದು ನೀಡಲಾಯಿತು.
ಶಾಲಾ ಶಿಕ್ಷಕಿಯರಾದ ವಿನುತ ಕುಮಾರಿ, ಶಾರದಾ ಜಿ ಹಾಗೂ ಕವಿತಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲಾ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ ಪಿ ಎಸ್ ಪ್ರಾರ್ಥಿಸಿದರು. ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಐ ವಾರ್ಷಿಕ ವರದಿಯನ್ನು ವಾಚಿಸಿದರು. ಹಿರಿಯ ಸಹ ಶಿಕ್ಷಕಿ ನಿರ್ಮಲ ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಯವರು ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.