Tejaswi Surya: ವೈವಾಹಿಕ ಜೀವನಕ್ಕೆ ಕಾಲಿಡಲು ಸಂಸದ ತೇಜಸ್ವಿ ಸೂರ್ಯ ಸಜ್ಜು; ವಧು ಯಾರು ಗೊತ್ತಾ?


ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿವಾಹ ವಿಚಾರ ಕೊನೆಗೂ ದೃಢಪಟ್ಟಿದ್ದು, ಯುವ ರಾಜಕಾರಣಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
“ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಮೆಚ್ಚುಗೆ ಗಳಿಸಿದ್ದ ಚೆನ್ನೈನ ಕರ್ನಾಟಕ ಸಂಗೀತ ಗಾಯಕಿ ಹಾಗೂ ಭರತ ನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್‌ ಅವರನ್ನು ಸಂಸದ ತೇಜಸ್ವಿ ಸೂರ್ಯ ವರಿಸಲಿದ್ದಾರೆ.




ಮಾರ್ಚ್‌ನಲ್ಲಿ ವಿವಾಹ
ಚೆನ್ನೈನ ಶಿವಶ್ರೀ ಸ್ಕಂದಪ್ರಸಾದ್‌ ಜತೆಗೆ ತೇಜಸ್ವಿ ಸೂರ್ಯ ಮಾ.5, 6ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ. 2 ತಿಂಗಳು ಹಿಂದೆಯೇ ಉಭಯ ಕುಟುಂಬದ ಸದಸ್ಯರು ಈ ಮದುವೆಗೆ ಒಪ್ಪಿಗೆಯ ಮುದ್ರೆ ಹಾಕಿದ್ದಾರೆ. ಈ ಮೂಲಕ ತೇಜಸ್ವಿ ಸೂರ್ಯ ಗೃಹಸ್ಥಾಶ್ರಮ ಪ್ರವೇಶ ಮಾಡಲಿದ್ದಾರೆ.

ಈ ಬಗ್ಗೆ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್‌ ಕುಟುಂಬ ವರ್ಗ ಇದುವರೆಗೆ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ, ಅವರ ಆಪ್ತ ಬಳಗ ಇದನ್ನು ದೃಢಪಡಿಸಿದೆ. ಮದುವೆ ಅತ್ಯಂತ ಖಾಸಗಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಐರನ್‌ ಮ್ಯಾನ್‌ ಮ್ಯಾರಥಾನ್‌ನಲ್ಲಿ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದ್ದರು. ಆ ಸಂದರ್ಭದಲ್ಲಿ ಶಿವಶ್ರೀ ಕೂಡಾ ಭಾಗವಹಿಸಿದ್ದರು ಎನ್ನಲಾಗಿದೆ.



ಯಾರು ಈ ಶಿವಶ್ರೀ?:
ಶಿವಶ್ರೀ ಸ್ಕಂದಪ್ರಸಾದ್‌ ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಬಯೋ ಇಂಜಿನಿಯರಿಂಗ್‌ ವಿಷಯದಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. ಮದ್ರಾಸ್‌ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಮದ್ರಾಸ್‌ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿ ಪಡೆದಿದ್ದಾರೆ. ಸೈಕ್ಲಿಂಗ್‌, ಟ್ರೆಕ್ಕಿಂಗ್‌ ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ತಮ್ಮದೇ ಆದ ಯೂಟ್ಯೂಬ್‌ ಚಾನಲ್‌ ಹೊಂದಿರುವ ಶಿವಶ್ರೀ 2 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಶ್ರೀರಾಮನ ಕುರಿತಾಗಿ ಶಿವಶ್ರೀ ಸ್ಕಂದಪ್ರಸಾದ್‌ “ಪೂಜಿಸಲೆಂದೇ ಹೂಗಳ ತಂದೆ’ ಕನ್ನಡ ಗೀತೆ ಪ್ರಸ್ತುತಪಡಿಸಿದ್ದರು. ಇದನ್ನು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಹಾಡನ್ನು ಗಮನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಹಾಡಿನ ಲಿಂಕ್‌ ಟ್ವೀಟ್‌ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.