ಸಿದ್ದರಾಮಯ್ಯ 16ನೇ ಬಜೆಟ್ಗೆ ಕೌಂಟ್ ಡೌನ್: ರಾಜ್ಯದ ಇತಿಹಾಸದಲ್ಲೇ ಮೊದಲ ಬಿಗ್ ಬಜೆಟ್ ಇಂದಿನಿಂದ ಬಜೆಟ್ 2025‌ ಪೂರ್ವಸಿದ್ಧತೆ ಸಭೆ


ಗಳೂರು, (ಫೆಬ್ರವರಿ 07): ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರದಿಂದ ವಿಶ್ರಾಂತಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ, ಬಜೆಟ್‌ ಕುರಿತ ಪೂರ್ವಸಿದ್ಧತಾ ಸಭೆಗಳನ್ನ ನಡೆಸಿದ್ದಾರೆ. ಫೆಬ್ರವರಿ.1ರಂದು ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದೀಗ ಮಾರ್ಚ್‌ ಮೊದಲ ವಾರದಲ್ಲಿ ಸಿದ್ದರಾಮಯ್ಯ ಅವರು ಬಹುನಿರೀಕ್ಷಿತ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ.




ನಿನ್ನೆ ಬೆಳಗ್ಗೆ 11 ಗಂಟೆಯಿಂದ ಸಂಜೆಯವರೆಗೂ ಇಡೀ ದಿನ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ. ಆದ್ರೆ, ಬಜೆಟ್ ಮಂಡನೆಯಾವಾಗ ಎನ್ನುವುದೇ ಇನ್ನೂ ದಿನಾಂಕ ಫಿಕ್ಸ್ ಆಗಿಲ್ಲ. ಹೀಗಾಗಿ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ದಿನಾಂಕ ನಿಗಧಿ ಮಾಡಲಿದ್ದಾರೆ.



ಇನ್ನೂ ಒಳಾಡಳಿತ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ, ಸಣ್ಣ ಕೈಗಾರಿಕಾ, ಇಂಧನಾ ಇಲಾಖೆ, ಲೋಕೋಪಯೋಗಿ ಕಾರ್ಮಿಕ ಇಲಾಖೆ ಸೇರಿದಂತೆ 10ಕ್ಕೂ ಹೆಚ್ಚು ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇಂದು (ಫೆಬ್ರವರಿ 07) ಸಭೆ ಮುಂದುವರಿಯಲಿದ್ದು, ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ಅಲ್ಪ‌ಸಂಖ್ಯಾತ ಮತ್ತು ವಕ್ಪ್ ಸೇರಿದಂತೆ ಹಲವು ಇಲಾಖೆಗಳೊಂದಿಗೆ ಸಭೆ ನಡೆಯಲಿದೆ. ಬಹುತೇಕ ಎಲ್ಲ ಇಲಾಖೆಗಳ‌ ಸಚಿವರು ಹೆಚ್ಚು ಅನುದಾನದ ಜೊತೆಗೆ ಹೊಸ ಕಾರ್ಯಕ್ರಮಗಳ ಅನುದಾನಕ್ಕೂ‌ ಡಿಮ್ಯಾಂಡ್ ಮಾಡಿದ್ದಾರೆ.




ಸಿಎಂ ಜೊತೆಗಿನ ಬಜೆಟ್ ಪೂರ್ವಬಾವಿ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಕೇಳಿದ್ದಾರೆ. ಹೊಸ‌ ಕಾರ್ಯಕ್ರಮಕ್ಕೆ ಬೇಡಿಕೆ ಇಟ್ಟಿದ್ದೇವೆ. ಬಾಕಿ ಬಿಲ್ ವಿಚಾರದ ಬಗ್ಗೆಯೂ ಕೂಡ ಚರ್ಚೆ ಮಾಡಿದ್ದೇವೆ. ಬೆಳಗಾವಿಯಲ್ಲಿ ಫ್ಲೈಓವರ್ ಗೆ ದುಡ್ಡು ಕೊಡಬೇಕು ಅಂತ ಕೇಳಿದ್ದೇವೆ.‌ ಸಾಕಷ್ಟು ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಕೆಸಿ ಪಂತ್ ಎಂಬ ನಮ್ಮ ಏಜೆನ್ಸಿ ಮೂಲಕ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಅಂತ ತಿಳಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಬಿಗ್ ಬಜೆಟ್​

ಸಿದ್ದರಾಮಯ್ಯ ಅವರ 16ನೇ ಬಜೆಟ್‌ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು. ಇದೀಗ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯನವರ ದಾಖಲೆಯ ಬಜೆಟ್

2025-26 ನೇ ಸಾಲಿನ ಬಜೆಟ್‌ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ ಮೊದಲ ವಾರದಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಇದು ಸಿದ್ದರಾಮಯ್ಯ ಅವರ 16ನೇ. ದಾಖಲೆಯ ಬಜೆಟ್‌ ಮಂಡನೆಯಾಗಿರಲಿದೆ. ಜುಲೈ 2023ರಲ್ಲಿ 14ನೇ ಬಜೆಟ್‌ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್‌ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್‌ ಆಗಿತ್ತು.

ಈ ಬಾರಿಯ ಬಜೆಟ್​ನಲ್ಲಿ ಸಿದ್ದರಾಮಯ್ಯನವರು ಏನೆಲ್ಲಾ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳ ಸಂಬಂಧ ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದು,ಈ ಬಾರಿ ಬಜೆಟ್​ನಲ್ಲಿ ಹೊಸ ಯೋಜನೆಗಳ ನಿರೀಕ್ಷೆಗಳು ಇಲ್ಲ ಎನ್ನುವ ಮಾತುಗಳು ಸಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ..