BIG BREAKING: ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ| ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ 250ಕ್ಕೂ ಹೆಚ್ಚು ಜನರ ಸಾವು

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಾಲ್ಕು ದಿನಗಳ ನಂತರ, ಇಂದು (ಫೆ.13ರ ಗುರುವಾರ) ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ 250ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದರು.



ಸಾವಿರಾರು ಜನರು ಸ್ಥಳಾಂತರಗೊಂಡರು. ಅದಾದ 21 ತಿಂಗಳ ನಂತರ ಸಿಂಗ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಮಣಿಪುರ ರಾಜ್ಯದಲ್ಲಿ ಸರ್ಕಾರ ಆಡಳಿತದಲ್ಲಿ ಮುಂದುವರೆಯಲು ಆಗುವುದಿಲ್ಲ. ಹೀಗಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. 

ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆ ಪ್ರಕಾರ, "ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ಆ ರಾಜ್ಯದ ಸರ್ಕಾರ ಆಡಳಿತ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

"ಆದ್ದರಿಂದ, ಈಗ ಸಂವಿಧಾನದ 356ನೇ ವಿಧಿಯಲ್ಲಿ ನೀಡಲಾದ ಅಧಿಕಾರಗಳನ್ನು ಮತ್ತು ಆ ನಿಟ್ಟಿನಲ್ಲಿ ನನಗೆ ಅನುವು ಮಾಡಿಕೊಡುವ ಇತರ ಎಲ್ಲಾ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಮಣಿಪುರ ರಾಜ್ಯದ ಸರ್ಕಾರದ ಎಲ್ಲಾ ಕಾರ್ಯಗಳನ್ನು ಮತ್ತು ಆ ರಾಜ್ಯದ ರಾಜ್ಯಪಾಲರಿಗೆ ನೀಡಲಾದ ಅಥವಾ ಚಲಾಯಿಸಬಹುದಾದ ಎಲ್ಲಾ ಅಧಿಕಾರಗಳನ್ನು ಭಾರತದ ರಾಷ್ಟ್ರಪತಿಯಾಗಿ ನಾನು ವಹಿಸಿಕೊಳ್ಳುತ್ತೇನೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ," ಎಂದು ರಾಷ್ಟ್ರಪತಿಯವರ ಹೇಳಿಕೆಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.




ಮಣಿಪುರ ವಿಧಾನಸಭೆಯನ್ನು ಕೂಡಾ ಅಮಾನತುಗೊಳಿಸಲಾಗಿದೆ.

ಸಾಧ್ಯವಾಗದ ಒಮ್ಮತದ ನಿರ್ಧಾರ

ಬಿರೇನ್ ಸಿಂಗ್ ಅವರ ರಾಜೀನಾಮೆಯ ನಂತರ, ಮಣಿಪುರ ಬಿಜೆಪಿ ಶಾಸಕರು, ತಮಗೆ ಉತ್ತರಾಧಿಕಾರಿಯನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಬಿಜೆಪಿ ಶಾಸಕರ ಗುಂಪು ಈ ವಾರ ಪಕ್ಷದ ಈಶಾನ್ಯ ಸಂಯೋಜಕ ಸಂಬಿತ್ ಪಾತ್ರಾ ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಿದವು. ಆದರೂ ರಾಜ್ಯದ ಮುಂದಿನ ಸಿಎಂ ಯಾರಾಗಬಹುದು ಎಂಬ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲು ಪಕ್ಷದ ನಾಯಕರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಬಿರೇನ್‌ ಸಿಂಗ್‌ ರಾಜೀನಾಮೆಯಾಗಿ ನಾಲ್ಕು ದಿನವಾದರೂ ಹೊಸ ಮುಖ್ಯಮಂತ್ರಿ ಆಯ್ಕೆ ಆಗಲಿಲ್ಲ.

ರಾಜ್ಯದಲ್ಲಿ ಮೈಟಿ ಮತ್ತು ಕುಕಿ ಸಮುದಾಯಗಳ ನಡುವೆ ಪ್ರಾರಂಭವಾದ ಘರ್ಷಣೆಗಳಿಂದ ಸುಮಾರು 250 ಜನರು ಸಾವನ್ನಪ್ಪಿದ್ದರು. ಅಂದಿನಿಂದ ಇಡೀ ರಾಜ್ಯದಲ್ಲಿ ಇದು ದೊಡ್ಡ ಚರ್ಚೆಯಾಗಿದೆ. ಪ್ರತಿಪಕ್ಷಗಳು ಮತ್ತು ಕುಕಿ ಸಮುದಾಯವು ಹಿಂಸಾಚಾರದ ಉಲ್ಬಣಕ್ಕೆ ಬಿರೇನ್ ಸಿಂಗ್ ಅವರನ್ನು ಹೊಣೆಗಾರರನ್ನಾಗಿ ಮಾಡಿದವು. ಹೀಗಾಗಿ ಅವರು ರಾಜೀನಾಮೆ ಸಲ್ಲಿಸಬೇಕಾಯ್ತು. ಆ ನಂತರ ಹೊಸ ಸಿಎಂ ಅಧಿಕಾರ ಸ್ವೀಕರಿಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.