Shoking News: ಹದಿಮೂರು ವರ್ಷದ ಶಾಲಾ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾಚಾರ


ತಮಿಳುನಾಡು: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಶಾಲೆಯ ಶಿಕ್ಷಕರೇ ನೀಚ ಕೃತ್ಯವೆಸಗಿ ಜೈಲು ಕಂಬಿ ಎನಿಸುತ್ತಿರುವ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.


ಪ್ರೌಢ ಶಾಲೆಯ ಮೂವರು ಶಿಕ್ಷರಿಂದಲೇ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿ ಸಂತ್ರಸ್ಥೆಯ ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.



ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.



ಬಾಲಕಿ ಶಾಲೆಗೆ ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಮಂಗಳವಾರ ಆಕೆಯ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಬಾಲಕಿಯ ಹೆತ್ತವರು ಮೂವರು ಅಧ್ಯಾಪಕರು ಆಕೆಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಬಗ್ಗೆ ಮುಖ್ಯೋಪಾಧ್ಯಾಯಿನಿಗೆ ತಿಳಿಸಿದರು. ಅನಂತರ ಈ ಘಟನೆ ಬೆಳಕಿಗೆ ಬಂದಿದೆ.


ಮುಖ್ಯೋಪಾಧ್ಯಾಯಿನಿ ಅದೇ ರಾತ್ರಿ ಜಿಲ್ಲಾ ಚೈಲ್ಡ್ ಲೈನ್ ನಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಚೈಲ್ಡ್ ಲೈನ್ ನ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದ್ದರು ಹಾಗೂ ತನಿಖೆ ಆರಂಭಿಸಿದ್ದರು. ಬಳಿಕ ಅವರು ಈ ಪ್ರಕರಣವನ್ನು ಪೊಲೀಸರಿಗೆ ವರದಿ ಮಾಡಿದ್ದರು.


ಓರ್ವ ಅಧ್ಯಾಪಕ ಬಾಲಕಿಯನ್ನು ಮೊದಲು ಅತ್ಯಾಚಾರ ಎಸಗಿದ. ಈ ವಿಚಾರ ಇತರ ಇಬ್ಬರು ಅಧ್ಯಾಪಕರಿಗೆ ತಿಳಿಯಿತು. ಅನಂತರ ಮೂವರು ಅಧ್ಯಾಪಕರು ಸೇರಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಪ್ರಕರಣಕ್ಕೆ ಸಂಬಂಧಿಸಿ ನಾವು ಮೂವರು ಅಧ್ಯಾಪಕರನ್ನು ಬಂಧಿಸಿದ್ದೇವೆ. ಅವರ ವಿರುದ್ಧ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ಮೂವರು ಅಧ್ಯಾಪಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕೃಷ್ಣಗರಿ ಎಸ್ಪಿ ಪಿ. ತಂಗದುರೈ ತಿಳಿಸಿದ್ದಾರೆ.


ಘಟನೆಯ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಾಲಕಿಯ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ನಿವಾಸಿಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾದ ಅಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಎಸ್ಪಿ ತಂಗದುರೈ ಅವರು ಭರವಸೆ ನೀಡಿದ ಬಳಿಕ ಅವರು ಚದುರಿದರು.