SSLC ವಿದ್ಯಾರ್ಥಿಗಳಿಗೆ ಈ ವರ್ಷದಿಂದ 'ಹೆಚ್ಚುವರಿ' ಗ್ರೇಸ್ ಮಾರ್ಕ್ಸ್ ಇಲ್ಲ; ಉತ್ತೀರ್ಣರಾಗಲು ಕನಿಷ್ಠ ಶೇ.35 ಅಂಕ ಕಡ್ಡಾಯ| ಹಿಜಾಬ್‌ಗೆ ಅವಕಾಶವಿಲ್ಲ..!?


ಮಂಗಳೂರು: ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 25 ಅಂಕ ಪಡೆದವರನ್ನು ಉತ್ತೀರ್ಣಗೊಳಿಸಲಾಗಿತ್ತು. ಆದರೆ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಶೇ. 35 ಅಂಕಗಳನ್ನು ಪಡೆಯಲೇ ಬೇಕು ಮತ್ತು ಯಾವುದೇ 3 ವಿಷಯಗಳಿಗೆ ಶೇ. 10ರಷ್ಟು ಕೃಪಾಂಕ ನೀಡಿ ಉತ್ತೀರ್ಣ ಮಾಡುವ ನಿಯಮ ಜಾರಿಯಲ್ಲಿರಲಿದೆ.


ಗುರುವಾರ 2024- 25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯ ಪೂರ್ವಸಿದ್ಧತೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ, ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಕಳೆದ ಬಾರಿ ವೆಬ್‌ಕಾಸ್ಟಿಂಗ್‌ ಹಿನ್ನೆಲೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ. 35ರಿಂದ ಶೇ. 25ಕ್ಕೆ ಇಳಿಸಲಾಗಿತ್ತು. ಜತೆಗೆ ಶೇ. 10 ಹೆಚ್ಚುವರಿ ಕೃಪಾಂಕ ನೀಡಲಾಗಿತ್ತು. ಆದರೆ ಈ ಬಾರಿ ಈ ಎರಡು ಅಂಶಗಳನ್ನು ತೆಗೆದು ಹಾಕಿ ಈ ಹಿಂದಿನಂತೆ ಉತ್ತೀರ್ಣರಾಗಲು ಶೇ. 35 ಅಂಕ ನಿಗದಿ ಪಡಿಸಲಾಗಿದೆ. ಇದರ ಅನ್ವಯ ವಿದ್ಯಾರ್ಥಿಗಳು ಪ್ರಥಮ ಭಾಷೆಯ ಲಿಖಿತ ಪರೀಕ್ಷೆಯಲ್ಲಿ ಶೇ. 35 ಮತ್ತು ಇತರ ವಿಷಯಗಳ ಲಿಖೀತ ಪರೀಕ್ಷೆಯಲ್ಲಿ ಶೇ. 28 ಅಂಕಗಳ ಜತೆಗೆ ಆಂತರಿಕ ಅಂಕ ಸೇರಿ ಶೇ. 35 ಅಂಕ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟ ಪಡಿಸಿದ್ದಾರೆ.

ಉಳಿದಂತೆ ಈ ಹಿಂದೆ ಇದ್ದಂತೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ 3 ವಿಷಯಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗೆ ಆ ವಿಷಯದಲ್ಲಿ ಶೇ. 10 ಕೃಪಾಂಕ ನೀಡಿದರೆ ಆತ ಉತ್ತೀರ್ಣರಾಗಲು ಇರುವ ಕನಿಷ್ಠ ಅಂಕ (219)ದ ಗಡಿ ದಾಟುವಂತಿದ್ದರೆ ಆಗ ಕೃಪಾಂಕ ನೀಡಲಾಗುತ್ತದೆ. ಇದೇ ರೀತಿ ದ್ವಿತೀಯ ಪಿಯುಸಿಯಲ್ಲಿಯೂ 2 ವಿಷಯಗಳಿಗೆ ಶೇ. 5 ಕೃಪಾಂಕ ನೀಡಿದರೆ ಆತ ಕನಿಷ್ಠ ಉತ್ತೀರ್ಣತೆಯ ಅಂಕ (210) ದಾಟುವಂತಿದ್ದರೆ ಆಗ ಕೃಪಾಂಕ ನೀಡಲಾಗುವುದು. ಉಳಿದಂತೆ ಕೃಪಾಂಕದ ಬಗ್ಗೆ ಪರೀಕ್ಷೆ ಮುಕ್ತಾಯಗೊಂಡ ಬಳಿಕವೂ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಬಹುದು ಎಂದು ಮಧು ಬಂಗಾರಪ್ಪ ಹೇಳಿದರು.



ಏನಿದು ಕೃಪಾಂಕ ವಿವಾದ?: 2023-24ರಲ್ಲಿ ಮೊದಲ ಬಾರಿಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್‌ ಪರಿಚಯಿಸಲಾಯಿತು. ಹಾಗೆಯೇ ಎಸೆಸೆಲ್ಸಿ ಫ‌ಲಿತಾಂಶ ಶೇ. 54ಕ್ಕೆ ಕುಸಿದಿತ್ತು. ವೆಬ್‌ಕಾಸ್ಟಿಂಗ್‌ನಿಂದಾಗಿ ಮಕ್ಕಳಲ್ಲಿ ಭಯ ಹುಟ್ಟಿದ ಕಾರಣ ಫ‌ಲಿತಾಂಶ ಕುಸಿದಿದೆ ಎಂದು ವ್ಯಾಖ್ಯಾನಿಸಿದ ಸರಕಾರ ಫ‌ಲಿತಾಂಶ ಸುಧಾರಿಸಲು ಉತ್ತೀರ್ಣರಾಗಲು ಕನಿಷ್ಠ 35 ಅಂಕ ಪಡೆಯಬೇಕು ಎಂಬ ನಿಯಮವನ್ನು ಸಡಿಲಿಸಿ ಶೇ. 25 ಅಂಕ ಪಡೆದವರಿಗೂ ಉತ್ತೀರ್ಣ ಭಾಗ್ಯ ಕಲ್ಪಿಸಿತ್ತು. ಜತೆಗೆ ಮೊದಲಿದ್ದ ಶೇ. 10 ಕೃಪಾಂಕದ ಜತೆಗೆ ಮತ್ತೆ ಶೇ. 10 ಕೃಪಾಂಕ ಅಂದರೆ ಒಟ್ಟು ಶೇ. 20 ಕೃಪಾಂಕ ನೀಡಿ ರಾಜ್ಯದ ಒಟ್ಟು ಎಸೆಸೆಲ್ಸಿ ಫ‌ಲಿತಾಂಶವನ್ನು ಶೇ. 74ಕ್ಕೆ ಎತ್ತರಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಶೇ. 20 ಕೃಪಾಂಕ ನೀಡಿದ್ದನ್ನು ಕಟುವಾಗಿ ಟೀಕಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮವನ್ನು ಮತ್ತೆ ಜಾರಿಗೆ ತರಲಾಗಿದೆ.



ಹಿಜಾಬ್‌ಗೆ ಅವಕಾಶವಿಲ್ಲ?
ರಾಜ್ಯದಲ್ಲಿ ಹಿಜಾಬ್‌ ಧರಿಸಿ ಶಾಲೆಗೆ ಹಾಜರಾಗುವಂತಿಲ್ಲ ಎಂದಿರುವ ನಿಯಮ ಈ ಬಾರಿಯೂ ಪರೀಕ್ಷೆಗೆ ಅನ್ವಯವಾಗಲಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಸುಪ್ರೀಂ ನೀಡಿದ ಆದೇಶ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದರು.



8.96 ಲಕ್ಷ ವಿದ್ಯಾರ್ಥಿಗಳು
ಎಸೆಸೆಲ್ಸಿ ಪರೀಕ್ಷೆ -1ರಲ್ಲಿ ಈ ಬಾರಿ 8,96,447 ವಿದ್ಯಾರ್ಥಿಗಳು ನೋಂದಾ ಯಿಸಿ ಕೊಂಡು ದಾಖಲೆ ನಿರ್ಮಿಸಿದ್ದಾರೆ. 2021ರಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ದಾಖಲೆಯಾಗಿತ್ತು. ಈ ಬಾರಿ 8,42,917 ಹೊಸ ವಿದ್ಯಾರ್ಥಿ ಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.