ದ.ಕ. ಜಿಲ್ಲೆಯಲ್ಲಿ ಒಟ್ಟು 55 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮಂಗಳೂರಿನಲ್ಲಿ 19, ಬಂಟ್ವಾಳದಲ್ಲಿ 6, ಪುತ್ತೂರು 5, ಬೆಳ್ತಂಗಡಿ 7, ಸುಳ್ಯ 2, ಮೂಡುಬಿದಿರೆ 5, ಕಡಬ 5, ಮೂಲ್ಕಿ 2, ಉಳ್ಳಾಲ ತಾಲೂಕಿನ 4 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ಪೈಕಿ 15 ಸರಕಾರಿ, 22 ಅನುದಾನಿತ ಹಾಗೂ 18 ಅನುದಾನ ರಹಿತ ಸಂಸ್ಥೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ವಿದ್ಯಾರ್ಥಿಗಳ ವಿವರ
ದ್ವಿತೀಯ ಪಿಯುಸಿ ಪರೀಕ್ಷೆಗೆ ದ.ಕ. ಜಿಲ್ಲೆಯಿಂದ ಒಟ್ಟು 36,374 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 34,434 ರೆಗ್ಯುಲರ್, 1,631 ಖಾಸಗಿ, ಇಬ್ಬರು ಇಂಪ್ರೂವ್‌ಮೆಂಟ್, 307 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಭ್ಯರ್ಥಿಗಳ ಪೈಕಿ 18,337 ಹುಡುಗಿಯರು, 18,037 ಹುಡುಗರು.
ಉಡುಪಿ: 16,203 ಮಂದಿ
ಉಡುಪಿ ಜಿಲ್ಲೆಯ 103 ಕಾಲೇಜಿನ 15,685 ವಿದ್ಯಾರ್ಥಿಗಳು ಸಹಿತವಾಗಿ ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳು ಹಾಗೂ ಮರುಪ್ರಯತ್ನ ಮಾಡುತ್ತಿರುವವರು ಸಹಿತ 16203 ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಜಿಲ್ಲೆಯ 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದ ಜಿ.ಪಂ. ಕಚೇರಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಜ್ಞಾನ ವಿಭಾಗದ 7,728, ವಾಣಿಜ್ಯ ವಿಭಾಗದ 7,246 ಹಾಗೂ ಕಲಾ ವಿಭಾಗದ 1,229 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 15,685 ಹೊಸಬರು, 351 ಖಾಸಗಿ, 163 ಪುನರಾವರ್ತಿತ ಹಾಗೂ 4 ಮರು ಪ್ರಯತ್ನ ಮಾಡುವವರು ಪರೀಕ್ಷೆ ಬರೆಯುವರು ಎಂದರು.
ಎಲ್ಲ ಕೊಠಡಿಗೂ ಸಿಸಿ ಕೆಮರಾ
ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಎಲ್ಲ ಪರೀಕ್ಷಾ ಕೇಂದ್ರದ ಕೊಠಡಿ ಒಳಗೆ ಹಾಗೂ ಹೊರಗೆ ಸಿಸಿ ಕೆಮರಾ ಅಳವಡಿಸಲಾಗಿದೆ. ಅವುಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್ ರೂಮ್‌ನಲ್ಲಿ ಪರಿವೀಕ್ಷಣೆ ಮಾಡಲಾಗುತ್ತದೆ ಎಂದರು.
ಜಿಲ್ಲೆಯಿಂದ ಒಂದು ಪರಿಶೀಲನೆ ತಂಡ, ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ರಾಜ್ಯದ ಒಂದು ತಂಡ ಹಠಾತ್ ಭೇಟಿ ನೀಡಲಿದೆ. ಹಿಜಾಬ್ ಧರಿಸಿ ಬರುವವರಿಗೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಇರಲಿದೆ ಎಂದರು. ಡಿಡಿಪಿಯು ಮಾರುತಿ ಉಪಸ್ಥಿತರಿದ್ದರು.
ಉಚಿತ ಪ್ರಯಾಣ
ಕೆಎಸ್ಸಾರ್ಟಿಸಿ ಆದೇಶದಂತೆ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸರಕಾರ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹು ದಾಗಿದೆ. ತಮ್ಮ ಪರೀಕ್ಷಾ ಪ್ರವೇಶ ಪತ್ರ(ಹಾಲ್‌ಟಿಕೆಟ್) ತೋರಿಸುವ ಮೂಲಕ ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ರೂಟ್‌ಗಳಲ್ಲೂ ಸರಿಯಾದ ಸಮಯಕ್ಕೆ ಬಸ್ ಓಡಿಸಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.