ಕರಾವಳಿಯಲ್ಲಿ ಸುಡುಬಿಸಿಲು: ಸುಳ್ಯದಲ್ಲಿ ಬಿಸಿಲಿನ ಆರ್ಭಟ 41.4 ಡಿಗ್ರಿ ಗರಿಷ್ಠ ಉಷ್ಣಾಂಶ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹೋಬಳಿಯಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವಾಗಿದೆ.


ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ 10, ಉಡುಪಿಯ ಎರಡು ಮತ್ತು ಕೊಡಗು ಜಿಲ್ಲೆಯ ಒಂದು ಪ್ರದೇಶದಲ್ಲಿ 38 ಡಿಗ್ರಿ ಸೆಲ್ಸಿಯಸ್‌ಗಿಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು (40.5 ಡಿಗ್ರಿ ಸೆಲ್ಸಿಯಸ್), ಕಡಬ (40.4), ಬೆಳ್ತಂಗಡಿ ಕೊಕ್ಕಡ (40.3), ಪುತ್ತೂರು (40.2), ಉಪ್ಪಿನಂಗಡಿ (40), ಮೂಡಬಿದಿರೆ (39), ಬಂಟ್ವಾಳ (38), ಉಡುಪಿ ಜಿಲ್ಲೆಯ ಹೆಬ್ರಿ (39.5), ಕಾರ್ಕಳ (38), ಕೊಡಗು ಜಿಲ್ಲೆಯ ಸಂಪಾಜೆ (40.7), ಉತ್ತರ ಕನ್ನಡ ಜಿಲ್ಲೆಯ ಕಾರವಾರ ಘಡಸಾಯಿ (41.1), ಹೊನ್ನಾವರ ಮಾವಿನಕುರ್ವೆ (39.2), ಮುಂಡಗೋಡ ಪಾಳ ಮತ್ತು ಕಾರವಾರ ಸಾವಂತವಾಡ (39.3), ಅಂಕೋಲಾ ಅವರ್ಸಾ (38.4) ಗರಿಷ್ಠ ಉಷ್ಣಾಂಶ ದಾಖಲಾದ ಹೋಬಳಿಗಳು.

ಕರಾವಳಿಯಲ್ಲಿ ಬುಧವಾರವೂ ಬಿಸಿ ವಾತಾವರಣ ಮುಂದುವರಿಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.